ADVERTISEMENT

`ನನ್ನನ್ನು ಜೈಲಿಗೆ ಕಳಿಸಿದವರಿಗೆ ಪಾಠ ಕಲಿಸಿ'

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST

ರಾಯಚೂರು: `ಮುಖ್ಯಮಂತ್ರಿಯಾಗಿದ್ದ ನನಗೆ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಅವಕಾಶ ಕೊಡದೆ ನಮ್ಮವರೇ ಆರೋಪ ಸೃಷ್ಟಿಸಿ ಜೈಲಿಗೆ ಕಳುಹಿಸಿದರು. ಅವರನ್ನೆಲ್ಲ ನಿರ್ನಾಮ ಮಾಡುವ ನಿರ್ಧಾರ ಮಾಡಿ' ಎಂದು ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೋಮವಾರ ಇಲ್ಲಿ ಬಣಜಿಗ ಸಮಾಜ ಬಾಂಧವರಿಗೆ ಕರೆ ನೀಡಿದರು.

ಇಲ್ಲಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಬಣಜಿಗರ ಸಮಾವೇಶ ಹಾಗೂ ಜಯದೇವಿ ತಾಯಿ ಲಿಗಾಡೆ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.`ಗ್ರಾಮ ರಾಜ್ಯ, ರಾಮ ರಾಜ್ಯ, ಸರ್ವ ಸಮುದಾಯದ ಏಳ್ಗೆ, ಸಮಾನತೆಯ ತತ್ವದ ಆಧಾರದ ಮೇಲೆ ಹತ್ತಾರು ಅಭಿವೃದ್ಧಿಪರ ಯೋಜನೆ ರೂಪಿಸಿ ಈ ರಾಜ್ಯದ ಏಳ್ಗೆಗೆ ಮುಂದಾದ ನನ್ನನ್ನು ಆಗ ನಾನಿದ್ದ ಪಕ್ಷದವರೇ ಕ್ಷುಲ್ಲಕ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು.

ಆರೋಪ ಸಾಬೀತಾಗುವುದಕ್ಕಿಂತ ಮುಂಚೆ ಜೈಲಿಗೆ ಕಳುಹಿಸಿದ ಉದಾಹರಣೆ ಪಾಕಿಸ್ತಾನದಲ್ಲೂ ಇಲ್ಲ ಎಂದು ನ್ಯಾಯಾಲಯದಲ್ಲಿ ನ್ಯಾಯಾಧೀಶರೇ ಅಭಿಪ್ರಾಯಪಟ್ಟಿದ್ದಾರೆ. ಆಗ ನಮ್ಮ (ಬಿಜೆಪಿ) ಕೆಲವರ ಷಡ್ಯಂತ್ರಕ್ಕೆ ಬಲಿಯಾದೆ. ಇದರಿಂದ ಈಗಲೂ ನನ್ನ ರಕ್ತ ಕುದಿಯುತ್ತಿದೆ. ಅದನ್ನು ತೋರಿಸಿಕೊಡುತ್ತಿಲ್ಲ ಅಷ್ಟೇ' ಎಂದು ಯಡಿಯೂರಪ್ಪ ಕೆಂಡ ಕಾಡಿದರು.ಲೋಕೋಪಯೋಗಿ ಖಾತೆ ಸಚಿವ ಸಿ.ಎಂ ಉದಾಸಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.