ADVERTISEMENT

ನಮಾಜ್‌ಗೆ ತಡೆ: ಮಹಿಳೆಯರ ವಿರೋಧ

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 19:59 IST
Last Updated 20 ಜುಲೈ 2013, 19:59 IST

ಹಾಸನ: ನಗರದ ಕೆ.ಆರ್. ಪುರಂನ ಮಸ್ಜಿದ್ -ಎ- ಮಾಮೂರ್‌ನಲ್ಲಿ ರಂಜಾನ್ ಮಾಸದಲ್ಲಿ ಮಹಿಳೆಯರು ಪ್ರಾರ್ಥನೆ ನಡೆಸುವುದನ್ನು ನಿಷೇಧಿಸಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ತೆಗೆದುಕೊಂಡ ನಿರ್ಧಾರವನ್ನು ಕೆಲವು ಮುಸ್ಲಿಂ ಮಹಿಳೆಯರು ವಿರೋಧಿಸಿದ್ದಾರೆ.

ಕೆ.ಆರ್. ಪುರಂನ ಮಸೀದಿಯಲ್ಲಿ ಪ್ರಾರ್ಥನೆ ನಡೆಸಲು ಮಹಿಳೆಯರಿಗೆ ಅವಕಾಶ ನೀಡಿರುವ ವಿಚಾರ ಕೆಲವು ದಿನಗಳಿಂದ ಗೊಂದಲ ಸೃಷ್ಟಿಸಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಅನೇಕ ವರ್ಷಗಳಿಂದ ಇಲ್ಲಿ ಮಹಿಳೆಯರು ಪ್ರಾರ್ಥನೆ ಸಲ್ಲಿಸುತ್ತ್ದ್ದಿದರು. ಈಚೆಗೆ ಒಂದು ಗುಂಪು ಇದನ್ನು ವಿರೋಧಿಸಿತ್ತು. ಇಸ್ಲಾಂನಲ್ಲಿ ಇದಕ್ಕೆ ಅವಕಾಶ ಇಲ್ಲ ಎಂಬುದು ಈ ಗುಂಪಿನ ವಾದ.

ಈ ಹಿನ್ನೆಲೆಯಲ್ಲಿ ಕೆ.ಆರ್. ಪುರಂ ಮಸೀದಿ ಸಮಿತಿ ಹಾಗೂ ವಿರೋಧಿ ಗುಂಪಿನ ಮಧ್ಯೆ ಮಾತಿನ ಚಕಮಕಿಗಳು ನಡೆದು ಪೊಲೀಸರ ಮಧ್ಯಸ್ತಿಕೆಯಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಯಾವುದೂ ಫಲನೀಡದ ಕಾರಣ ಕಳೆದ ಗುರುವಾರ (ಜುಲೈ 18) ಉಪವಿಭಾಗಾಧಿಕಾರಿ ಜಗದೀಶ್ ಹಾಗೂ ಜಿಲ್ಲಾ ವಕ್ಫ್  ಸಲಹಾ ಸಮಿತಿಯ ಅಧ್ಯಕ್ಷ ಸಯ್ಯದ್ ಖಾಸಿಮ್ ನೇತೃತ್ವದಲ್ಲಿ ಸಭೆ ಆಯೋಜಿಸಿ ಮಹಿಳೆಯರಿಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿತ್ತು. ಆದರೆ, ಈ ತೀರ್ಮಾವನ್ನು ಮಹಿಳೆಯರು ಒಪ್ಪದೇ, ನಮಾಜ್ ಮುಂದುವರಿಸಿದ್ದಾರೆ.

ಕೆಲವು ವರ್ಷಗಳಿಂದ ಮಸೀದಿಯಲ್ಲಿ ತರಾವ್ಹಿ ನಮಾಜ್ (ರಂಜಾನ್ ಸಮಯದಲ್ಲಿ ರಾತ್ರಿ 8ರಿಂದ 10 ಗಂಟೆವರೆಗೆ ನಡೆಯುವ ಪ್ರಾರ್ಥನೆ) ಮಾಡುತ್ತಿದ್ದ ಮಹಿಳೆಯರ ಗುಂಪು, `ಪ್ರತ್ಯೇಕ ವ್ಯವಸ್ಥೆ ಇದ್ದಲ್ಲಿ, ಮಸೀದಿಯಲ್ಲಿ ತರಾವ್ಹಿ ಪ್ರಾರ್ಥನೆ ಸಲ್ಲಿಸುವ ಹಕ್ಕನ್ನು ಕುರಾನ್ ಮಹಿಳೆಯರಿಗೆ ನೀಡಿದೆ. ಕೆಲವರು ಅದನ್ನು ತಡೆಯಲು ಪ್ರಯತ್ನಿಸುತ್ತಿದ್ದು, ನಮಗೆ ರಕ್ಷಣೆ ನೀಡಬೇಕು' ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ತಡೆಯಬೇಡಿ: ಪ್ರವಾದಿ
`ಮಹಿಳೆಯರು ಮಸೀದಿಗೆ ಬರುವುದನ್ನು ತಡೆಯಬೇಡಿ ಎಂದು ಪ್ರವಾದಿಗಳು ಹೇಳಿದ್ದಾರೆ. ಜತೆಗೆ, ಅವರು ಮನೆಯಲ್ಲಿ ನಮಾಜ್ ಮಾಡುವುದು ಉತ್ತಮ ಎಂದೂ ಹೇಳಿದ್ದಾರೆ. ಅಂದರೆ, ಮಸೀದಿಗೆ ಬರಲು ಅವರಿಗೆ ಅಧಿಕಾರ ಇದೆ. ಇದನ್ನು ನಿಷೇಧಿಸುವ ಅಧಿಕಾರ ವಕ್ಫ್ ಸಲಹಾ ಸಮಿತಿಗೆ ಇಲ್ಲ. ನಮ್ಮಲ್ಲಿ ಶಾಂತಿಯುತವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ಅದನ್ನು ಮುಂದುವರಿಸುತ್ತೇವೆ'
- ಆಸಿಫ್, ಕೆ.ಆರ್.ಪುರಂ ಮಸೀದಿಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.