ADVERTISEMENT

ನಮ್ಮ ಮೆಟ್ರೊದಲ್ಲಿ ಹಿಂದಿ ಪ್ರವೇಶ ಪಡೆದ ಬಗೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 8:52 IST
Last Updated 7 ಜುಲೈ 2017, 8:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಮ್ಮ ಮೆಟ್ರೊದಲ್ಲಿ ಹಿಂದಿ ಭಾಷೆ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪ ತೀವ್ರ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಮಾಡಿದ್ದ ಮನವಿಗೆ ಕೇಂದ್ರ ಸರ್ಕಾರ ಕನಿಷ್ಠ ಪ್ರತಿಕ್ರಿಯೆ ನೀಡುವ ಸೌಜನ್ಯವನ್ನೂ ತೋರಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ.

ನಮ್ಮ ಮೆಟ್ರೊದಲ್ಲಿ ಹಿಂದಿ ಭಾಷೆ ಬಳಸುವಂತೆ ಒತ್ತಡ ಹೇರಬಾರದು ಎಂಬ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರಕ್ಕೆ ಪ್ರತಿಕ್ರಿಯೆಯನ್ನೇ ನೀಡದ ಕೇಂದ್ರ ಸರ್ಕಾರ, ಅದಾದ ಆರು ತಿಂಗಳ ಬಳಿಕ ಹಿಂದಿ ಭಾಷೆ ಅನುಷ್ಠಾನಗೊಳಿಸುವಂತೆ ‘ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್‌ಸಿಎಲ್‌)’ ಪತ್ರ ಬರೆದಿತ್ತು.

ಬಿಎಂಆರ್‌ಸಿಎಲ್‌ ಏನು ಹೇಳಿತ್ತು?: ನಮ್ಮ ಮೆಟ್ರೊದಲ್ಲಿ ಭಾಷೆಯ ಬಳಕೆಗೆ ಸಂಬಂಧಿಸಿ ಮಾಹಿತಿ ಹಕ್ಕು ಕಾರ್ಯಕರ್ತರು 2011ರ ನವೆಂಬರ್‌ನಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಬಿಎಂಆರ್‌ಸಿಎಲ್‌, ಕೇಂದ್ರ ಸರ್ಕಾರದ ಭಾಷಾ ನೀತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿತ್ತು. ಇದರಿಂದ ಸಮಾಧಾನಗೊಳ್ಳದ ಮಾಹಿತಿ ಹಕ್ಕು ಕಾರ್ಯಕರ್ತರು ಭಾಷಾ ನೀತಿಯ ಬಗ್ಗೆ ವಿವರಣೆ ಕೋರಿ ಮತ್ತೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಇ–ಮೇಲ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಬಿಎಂಆರ್‌ಸಿಎಲ್‌, ‘ಹಿಂದಿ ವಿರೋಧಿ ಅಭಿಯಾನ ಮುಂದುವರಿಸಬೇಡಿ. ನಾವು ರಾಷ್ಟ್ರೀಯ ನೀತಿಯನ್ನು ಅನುಸರಿಸುತ್ತಿದ್ದೇವೆ. ಇದಕ್ಕೆ ವಿರೋಧವಿದ್ದಲ್ಲಿ ನಿಮ್ಮ ವಕೀಲರನ್ನು ಭೇಟಿಯಾಗಿ. ಅವರು ನಿಮಗೆ ಕಾನೂನು ಸಲಹೆ ನೀಡಬಹುದು’ ಎಂಬ ಉತ್ತರ ನೀಡಿತ್ತು. ಆದರೆ, ವಿವರಣೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಎರಡು ವರ್ಷಗಳ ಕಾಲ ಉತ್ತರ ನೀಡುವ ಗೋಜಿಗೇ ಹೋಗಿರಲಿಲ್ಲ.

ADVERTISEMENT

ನಂತರ ಹೈಕೋರ್ಟ್ ನಿರ್ದೇಶನದ ಮೇರೆಗೆ 2013ರಲ್ಲಿ ಮಾಹಿತಿ ನೀಡಿತ್ತು. ‘ಬಿಎಂಆರ್‌ಸಿಎಲ್‌ ಮಂಡಳಿ ನಿರ್ದೇಶಿತ ಕಂಪೆನಿ. ಹೀಗಾಗಿ ತನ್ನದೇ ಆದ ಭಾಷಾ ನೀತಿಯನ್ನು ಅಳವಡಿಸಿಕೊಂಡಿದೆ. ಸ್ಥಳೀಯ ಭಾಷೆಗೆ ಆದ್ಯತೆ ನೀಡುವುದರೊಂದಿಗೆ ಪ್ರಯಾಣಿಕರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯನ್ನು ಬಳಸಲು ತೀರ್ಮಾನಿಸಲಾಗಿದೆ’ ಎಂದು ವಿವರಣೆ ನೀಡಿತ್ತು.

ಕೇಂದ್ರ ಸರ್ಕಾರ ಹೇಳಿದ್ದೇನು?: ಮೆಟ್ರೊದಲ್ಲಿ ಮೂರು ಭಾಷೆ ನೀತಿ ಅಳವಡಿಸುವಂತೆ 2016ರ ಮೇ 19ರಂದು ಕೇಂದ್ರ ಸರ್ಕಾರ ಬಿಎಂಆರ್‌ಸಿಎಲ್‌ಗೆ ಪತ್ರ ಬರೆದಿತ್ತು. ಭಾಷಾ ಇಲಾಖೆ ಮತ್ತು ಗೃಹ ಇಲಾಖೆಯ ಹೆಸರು ಉಲ್ಲೇಖಿಸಿ ಬರೆಯಲಾಗಿದ್ದ ಪತ್ರದಲ್ಲಿ ಕೇಂದ್ರ ಸರ್ಕಾರದ ಅಧಿಕೃತ ಭಾಷೆಯನ್ನು ಮೆಟ್ರೊದಲ್ಲಿ ಬಳಸುವಂತೆ ಸೂಚಿಸಲಾಗಿತ್ತು. ರೈಲು ನಿಲ್ದಾಣ, ನಕ್ಷೆಗಳು, ಸೂಚನಾ ಫಲಕಗಳಲ್ಲಿ ‘ರಾಷ್ಟ್ರ ಭಾಷೆ’ಯನ್ನು (ಹಿಂದಿ ರಾಷ್ಟ್ರ ಭಾಷೆ ಎಂದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿಲ್ಲ) ಬಳಸಬೇಕು ಎಂದು ನಿರ್ದೇಶಿಸಲಾಗಿತ್ತು. ಹಿಂದಿಯನ್ನು ಬಳಸಬೇಕು ಎಂಬರ್ಥದಲ್ಲಿ ಇದನ್ನು ಹೇಳಲಾಗಿತ್ತು.

ಬಿಎಂಆರ್‌ಸಿಎಲ್‌ನಿಂದ ರಾಜ್ಯ ಸರ್ಕಾರಕ್ಕೆ ಮಾಹಿತಿ: ಹಿಂದಿ ಬಳಕೆಗೆ ತೀವ್ರ ವಿರೋಧ ವ್ಯಕ್ತವಾದ ತಕ್ಷಣ, 2016ರ ಮೇ 21ರಂದು ಬಿಎಂಆರ್‌ಸಿಎಲ್‌ ರಾಜ್ಯ ಸರ್ಕಾರಕ್ಕೆ ಈ ಕುರಿತು ಮಾಹಿತಿ ನೀಡಿತ್ತು.

ರಾಜ್ಯದಿಂದ ಕೇಂದ್ರಕ್ಕೆ ಪತ್ರ: ಕೇಂದ್ರ ಸರ್ಕಾರದ ಅಧಿಕೃತ ‘ಕಚೇರಿ ಭಾಷೆ’ ನೀತಿಯಿಂದ ನಮ್ಮ ಮೆಟ್ರೊಕ್ಕೆ ವಿನಾಯಿತಿ ನೀಡಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ 2016ರ ಜುಲೈ 2ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ‘ಕೇಂದ್ರ ಸರ್ಕಾರದ ಎಲ್ಲ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ನಮ್ಮ ಮೆಟ್ರೊ ಒಪ್ಪಂದದಲ್ಲಿ ಉಲ್ಲೇಖಿಸಲಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇಕಡ 50ರಷ್ಟು ಪಾಲು ಹೊಂದಿರುವುದರಿಂದ ನಮ್ಮ ಮೆಟ್ರೊವನ್ನು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಸಂಸ್ಥೆ ಎಂದು ಪರಿಗಣಿಸಲಾಗದು. ಅಲ್ಲದೆ, ಯೋಜನೆಯಲ್ಲಿ ಕರ್ನಾಟಕ ಸರ್ಕಾರವೇ ಹೆಚ್ಚಿನ ಹೂಡಿಕೆ ಮಾಡಿದೆ. ಹೀಗಾಗಿ ನಮ್ಮ ಮೆಟ್ರೊದಲ್ಲಿ ಹಿಂದಿ ಭಾಷೆ ಬಳಸುವಂತೆ ಒತ್ತಡ ಹೇರಬಾರದು’ ಎಂದು ಪತ್ರದಲ್ಲಿ ಮನವಿ ಮಾಡಲಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರ ಪ್ರತಿಕ್ರಿಯೆಯನ್ನೇ ನೀಡಿಲ್ಲ.

ಹಿಂದಿ ಅನುಷ್ಠಾನಗೊಳಿಸಲು ಕೇಂದ್ರ ಸೂಚನೆ: 2016 ಡಿಸೆಂಬರ್ 9ರಂದು ನಮ್ಮ ಮೆಟ್ರೊ ಸೇರಿದಂತೆ ಎಲ್ಲ ಮೆಟ್ರೊ ರೈಲು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಹಿಂದಿ ಭಾಷೆ ಅನುಷ್ಠಾನಗೊಳಿಸುವಂತೆ ಸೂಚಿಸಿತ್ತು.

ಪತ್ರದಲ್ಲೇನಿತ್ತು?: ‘ಕೇಂದ್ರ ನಗರಾಭಿವೃದ್ಧಿ ಸಚಿವರ ನೇತೃತ್ವದಲ್ಲಿ 2016ರ ಅಕ್ಟೋಬರ್ 18ರಂದು ಕೇರಳದ ಕೊಚ್ಚಿಯಲ್ಲಿ ‘ಜಂಟಿ ಹಿಂದಿ ಸಲಹಾ ಸಮಿತಿ’ ಸಭೆ ನಡೆಸಲಾಗಿದೆ. ಹಿಂದಿಯೇತರ ಪ್ರದೇಶಗಳ ಮೆಟ್ರೊ ರೈಲುಗಳಲ್ಲಿಯೂ ಕೇಂದ್ರ ಸರ್ಕಾರದ ‘ಕಚೇರಿ ಭಾಷಾ’ ನೀತಿ ಅನ್ವಯ ಹಿಂದಿ ಅನುಷ್ಠಾನಗೊಳಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇದರಂತೆ, ರೈಲು ನಿಲ್ದಾಣಗಳಲ್ಲಿರುವ ನಾಮಫಲಕ, ಸೂಚನಾಫಲಕ, ಭಿತ್ತಿಪತ್ರಗಳಲ್ಲಿ ಹಿಂದಿ ಭಾಷೆ ಬಳಕೆ ಅನುಷ್ಠಾನಗೊಳಿಸಬೇಕು. ಘೋಷಣೆಗಳನ್ನು ಹಿಂದಿಯಲ್ಲಿಯೂ ಮಾಡಬೇಕು’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

‘ರಾಜ್ಯ ಸರ್ಕಾರದ ಮನವಿಗೆ ಸೊಪ್ಪುಹಾಕದೆ ಕೇಂದ್ರ ಸರ್ಕಾವು ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಇದರಿಂದ ತಿಳಿದು ಬರುತ್ತದೆ. ಹಿಂದಿ ಹೇರಿಕೆ ಮಾಡಲಾಗುತ್ತಿದೆ’ ಎಂದು ಬನವಾಸಿ ಬಳಗದ ಅರುಣ್ ಜಾವಗಲ್ ಆರೋಪಿಸಿದ್ದಾರೆ.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.