ADVERTISEMENT

ನರೇಗಾ ಅನುಭವ ಕಥನ ‘ನೆಲದ ಸಿರಿ’!

ಮಹಿಳೆಯರೇ ಹೊರತಂದಿರುವ ಪುಸ್ತಕ ಬಿಡುಗಡೆ ಇಂದು

ಯೋಗೇಶ್ ಮಾರೇನಹಳ್ಳಿ
Published 16 ಜೂನ್ 2017, 19:55 IST
Last Updated 16 ಜೂನ್ 2017, 19:55 IST
ನರೇಗಾ ಅನುಭವ ಕಥನ ‘ನೆಲದ ಸಿರಿ’!
ನರೇಗಾ ಅನುಭವ ಕಥನ ‘ನೆಲದ ಸಿರಿ’!   

ಮಂಡ್ಯ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯ ಮಹಿಳಾ ಕೂಲಿ ಕಾರ್ಮಿಕರು ಹಾಗೂ ಕಾರ್ಮಿಕ ಹೋರಾಟಗಾರರು ಕಂಡ ಅನುಭವಗಳು ‘ನೆಲದ ಸಿರಿ’ ಪುಸ್ತಕ ರೂಪ ಪಡೆದಿವೆ. ಶನಿವಾರ ನಗರದ ಗಾಂಧಿಭವನದಲ್ಲಿ ಪುಸ್ತಕ ಬಿಡುಗಡೆಯಾಗಲಿದೆ.

ಮಹಿಳಾ ಕಾರ್ಮಿಕರು ಹಾಗೂ ಹೋರಾಟಗಾರರೇ ನೆಲದ ಸಿರಿ ಪುಸ್ತಕ ಬರೆದಿದ್ದಾರೆ. ಜನವಾದಿ ಮಹಿಳಾ ಸಂಘಟನೆ ಪುಸ್ತಕ ಪ್ರಕಟಿಸುತ್ತಿದೆ. ಅನಕ್ಷರಸ್ಥ ಮಹಿಳಾ ಕಾರ್ಮಿಕರ ಅನುಭವಗಳು ಇಲ್ಲಿ ಅಕ್ಷರ ರೂಪ ಪಡೆದಿವೆ. ಭಾರತ ಸಂವಿಧಾನದ ಮುನ್ನುಡಿ (ಪ್ರಿಯಾಂಬಲ್‌) ಪುಟದ ಅಕ್ಷರಗಳಿಂದ ಆರಂಭವಾಗುವ ಪುಸ್ತಕ, ಕಾರ್ಮಿಕರ ಬದುಕಿನ ಮೇಲೆ ಬೆಳಕು ಚೆಲ್ಲಿದೆ.

‘ನರೇಗಾ ಯೋಜನೆ ಜಾರಿಯಾದ ನಂತರ ಹಳ್ಳಿಗಳಲ್ಲಿ ಅಶ್ಪೃಶ್ಯತೆ ದೂರವಾಗುತ್ತಿದೆ. ಕೆಲಸ ಮಾಡುವ ಜಾಗದಲ್ಲಿ ಎರಡು ಲೋಟದ ಸಂಸ್ಕೃತಿ (ಮೇಲ್ಜಾತಿ –ಕೆಳಜಾತಿಯವರು ನೀರು ಕುಡಿಯುವ ಪ್ರತ್ಯೇಕ ಲೋಟ) ಈಗಿಲ್ಲ. ಗ್ರಾಮೀಣ ಕಾರ್ಮಿಕರ ಕೈಗೆ ಕೆಲಸ ಕೊಟ್ಟಿರುವ ನರೇಗಾ ಯೋಜನೆ ಸಾಮರಸ್ಯವನ್ನೂ ಕಲಿಸುತ್ತಿದೆ’ ಎಂದು ಪುಸ್ತಕದ ಸಹ ಸಂಪಾದಕಿ ಹಾಗೂ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷೆ ದೇವಿ ಹೇಳಿದರು.

ಮಹಿಳೆ ಒಗ್ಗಟ್ಟಾದರೆ ಹಳ್ಳಿಗಳ ಚಿತ್ರಣ ಬದಲಿಸಬಹುದು ಎಂಬುದನ್ನು ‘ನಡೆದಷ್ಟು ದೂರ; ದುಡಿದಷ್ಟು ಕೆಲಸ’ ಲೇಖನ ವಿವರಿಸುತ್ತದೆ.

ಮಹಿಳಾ ಕಾರ್ಮಿಕರು ಚಳವಳಿ ನಡೆಸಿ ಮಳವಳ್ಳಿ ತಾಲ್ಲೂಕಿನ ಗುಳಘಟ್ಟ ಗ್ರಾಮವನ್ನು ಮದ್ಯಪಾನ ನಿಷೇಧಿತ ಪ್ರದೇಶವನ್ನಾಗಿ ಮಾಡಿದ ಕತೆ ಮಹಿಳೆಯರ ಒಗ್ಗಟ್ಟನ್ನು ಸಾಕ್ಷೀಕರಿಸುತ್ತದೆ.

ಗಂಡಸರೇಕೆ ಕೆಲಸಕ್ಕೆ ಬರಲ್ಲ!: ಜಿಲ್ಲೆಯ ನರೇಗಾ ಕಾರ್ಮಿಕರಲ್ಲಿ ಶೇ 90ರಷ್ಟು ಕಾರ್ಮಿಕರು ಮಹಿಳೆಯರೇ ಇದ್ದಾರೆ. ಈ ಕುರಿತು ‘ಗಂಡಸರೇಕೆ ಕೆಲಸಕ್ಕೆ ಬರಲ್ಲ’  ಲೇಖನ ವಿವರಿಸುತ್ತದೆ. ಮಹಿಳೆಯರು ಹಾರೆ, ಗುದ್ದಲಿ ಹಿಡಿದು ನಿಂತಾಗ ಪುರುಷನಿಗೆ ನಾಚಿಕೆಯಾಗುತ್ತಿದೆ.

ಅದಕ್ಕಾಗಿ ಪುರುಷರು ಕೆಲಸಕ್ಕೆ ಬರುತ್ತಿಲ್ಲ ಎನ್ನುವ ವಿಷಯ ಪುಸ್ತಕದಲ್ಲಿ ಗಮನ ಸೆಳೆಯುತ್ತದೆ. ಕಾರ್ಮಿಕರ ಹಲವು ಅನುಭವ ಕಥನಗಳು ಇದನ್ನು ಪುಷ್ಟೀಕರಿಸುತ್ತವೆ.

‘ಹೆಣ್ಣಾಳಿಗೆ– ಗಂಡಾಳಿಗೆ ಒಂದೇ ಕೂಲಿ ಅಂದ್ರೆ ಅದೆಂಗೆ ಒಪ್ಕೊಳೋದು’ ಎಂದು ದೊಡ್ಡರಸಿನಕೆರೆಯ ಅಂಕೇಗೌಡ, ಶಿವಲಿಂಗೇಗೌಡ ಪ್ರಶ್ನಿಸುತ್ತಾರೆ.
‘ಗಂಡಾಳಿಗೆ ಹೆಣ್ಣಾಳಿಗಿಂತ ಐವತ್ತು ರೂಪಾಯಿ ಜಾಸ್ತಿ ಕೊಟ್ರೆ ಕೆಲ್ಸಕ್ಕೆ ಬರ್ತೀವಿ ಎನ್ನುವ ನಾಗೇಗೌಡರ ಮಾತುಗಳು ಪುರುಷಾಧಿಕಾರದ ಅಹಂಕಾರವನ್ನು ಒತ್ತಿ ಹೇಳುತ್ತವೆ.

‘ರಟ್ಟೇಲಿ ಶಕ್ತಿ ಇರೋವರ್ಗೂ ನನ್ನ ಊಟ ನನ್ನದು’
‘ಯಾರ ಮುಂದೆಯೂ ಕೈಚಾಚಲ್ಲ, ರಟ್ಟೇಲಿ ಶಕ್ತಿ ಇರೋವರ್ಗೂ ದುಡಿತೀನಿ’ ಎನ್ನುವ 46 ವರ್ಷ ವಯಸ್ಸಿನ ವಿಧವೆ ಚಿಕ್ಕಮಣಿ ಮಾತುಗಳಿಗೆ ನರೇಗಾ ಯೋಜನೆ ಶಕ್ತಿ ತುಂಬಿದೆ. ಊರು ಬಿಟ್ಟು ನಗರಕ್ಕೆ ಹೊರಟಿದ್ದ ನಿಂಗಮ್ಮ ನರೇಗಾ ಕೆಲಸದಿಂದ ಬದುಕು ಬದಲಿಸಿಕೊಂಡ ಕತೆ, ಅಪಘಾತದಲ್ಲಿ ಗಾಯಗೊಂಡು ಹಾಸಿಗೆ ಹಿಡಿದಿದ್ದ ಪತಿಯ ಪ್ರಾಣ ಉಳಿಸಿದ ಕೆಂಚಮ್ಮನ ಕತೆ, ಕೆಲಸ ಮಾಡಿ ಮನೆಗೆ ಕರೆಂಟ್‌ ಸಂಪರ್ಕ ಪಡೆದ ಪಾರ್ವತಿ ಕತೆ ಪುಸ್ತಕವನ್ನು ಆವರಿಸಿಕೊಳ್ಳುತ್ತವೆ.  ಇಂಗ್ಲಿಷ್‌ಗೆ ಭಾಷಾಂತರಿಸುವ ಯೋಚನೆ ಜನವಾದಿ ಮಹಿಳಾ ಸಂಘಟನೆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT