ADVERTISEMENT

ನವೆಂಬರ್ 2ನೇ ವಾರದಿಂದ ಗೌಡರ ಅಂತಿಮ ಹೋರಾಟ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಹಾಸನ: `ನವೆಂಬರ್ ಎರಡನೇ ವಾರದಿಂದ ನಾನು ನನ್ನ ರಾಜಕೀಯ ಜೀವನದ ಅಂತಿಮ ಹೋರಾಟ ಆರಂಭಿಸಲಿದ್ದೇನೆ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ~ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಅಧ್ಯಕ್ಷ ಎಚ್.ಡಿ. ದೇವೇಗೌಡ ನುಡಿದರು.

ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ಸೊಮವಾರ ಹಾಸನಕ್ಕೆ ಬಂದಿದ್ದ ಅವರು ಸಭೆಯ ಬಳಿಕ ಪತ್ರಕರ್ತರೊಡನೆ ಮಾತನಾಡಿದರು.

`ನವೆಂಬರ್ ಎರಡನೇ ವಾರದಿಂದ ಎರಡೂವರೆ ತಿಂಗಳು ಕಾಲ ರಾಜ್ಯದಲ್ಲಿ ಪ್ರವಾಸ ಮಾಡಲು ತೀರ್ಮಾನಿಸಿದ್ದೇನೆ. ಇದು ಮಧ್ಯಂತರ ಚುನಾವಣೆಯ ಸಿದ್ಧತೆ ಎನ್ನುವುದರಲ್ಲಿ ಮುಚ್ಚು ಮರೆ ಇಲ್ಲ. ಯಾತ್ರೆಯನ್ನು ಎಲ್ಲಿಂದ ಆರಂಭಿಸಬೇಕು ಎಂಬುದನ್ನು ತೀರ್ಮಾನ ಮಾಡಿಲ್ಲ. ಬಾಗಲಕೋಟೆ ಅಥವಾ ಮಲೆಮಾದೇಶ್ವರ ಬೆಟ್ಟದಿಂದ ಆರಂಭಿಸಬೇಕೆಂಬ ಉದ್ದೇಶವಿದೆ. ದೇವೇಗೌಡರ ರಾಜಕೀಯ ಜೀವನ ಮುಗಿಯಿತು, ಜೆಡಿಎಸ್ ಅವಸಾನ ಹೊಂದುತ್ತಿದೆ ಎಂದು ಪ್ರಚಾರ ಮಾಡುತ್ತಿರುವವರಿಗೆ ಈ ಯಾತ್ರೆಯ ಮೂಲಕ ಉತ್ತರ ಕೊಡುತ್ತೇನೆ~ ಎಂದು ನುಡಿದರು.

ADVERTISEMENT

`ರಥಯಾತ್ರೆ ಅಥವಾ ಇನ್ಯಾವುದೋ ಹೆಸರಿಟ್ಟು ಪ್ರವಾಸ ಮಾಡುವುದಿಲ್ಲ. ಪಕ್ಷ ಸಂಘಟಿಸುವುದು ಮತ್ತು ರಾಜ್ಯ ಸರ್ಕಾರ ಮೂರೂವರೆ ವರ್ಷಗಳಲ್ಲಿ ಏನೇನು ಮಾಡಿದೆ ಎಂದು ಜನರಿಗೆ ತಿಳಿಸುವುದು ನನ್ನ ಉದ್ದೇಶ. ಹಾಗೆಯೇ ಎಲ್ಲ ವಿಧಾನಸಭಾ ಕ್ಷೇತ್ರಗಳ ಜನರು ಏನೇನು ಅಪೇಕ್ಷಿಸುತ್ತಿದ್ದಾರೆ ಎಂಬುದನ್ನೂ ತಿಳಿದುಕೊಳ್ಳುತ್ತೇನೆ~ ಎಂದರು.
ಅಡ್ವಾಣಿಯವರ ರಥಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ದೇವೇಗೌಡರು `ಅವರ ಯಾತ್ರೆಯ ಉದ್ದೇಶವೇ ಬೇರೆ, ನನ್ನ ಉದ್ದೇಶವೇ ಬೇರೆ~ ಎಂದರು.

ರಾಷ್ಟ್ರೀಯ ಪಕ್ಷಗಳೇ ಹೊಣೆ: ಕೇಂದ್ರ ಹಾಗೂ ರಾಜ್ಯದ ರಾಜಕಾರಣಿಗಳು ಜೈಲಿಗೆ ಹೋಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡುತ್ತ, ~ರಾಷ್ಟ್ರ ಮತ್ತು ರಾಜ್ಯದಲ್ಲಿ ನಡೆದ ಎಲ್ಲ ಅವ್ಯವಸ್ಥೆ, ಹಗರಣಗಳ ಹೊಣೆಯನ್ನು ಎರಡು ರಾಷ್ಟ್ರೀಯ ಪಕ್ಷಗಳೇ ಹೊರಬೇಕು. ಆರು ವರ್ಷ ಎನ್‌ಡಿಎ ಹಾಗೂ ಏಳು ವರ್ಷಗಳಿಂದ ಯುಪಿಎ ಆಡಳಿತ ನಡೆಸಿವೆ. ಎಲ್ಲ ಹಗರಣಗಳೂ ಈ ಅವಧಿಯಲ್ಲೇ ಆದವುಗಳು. ಸಮ್ಮಿಶ್ರ ಸರ್ಕಾರ ಇರುವುದರಿಂದ ನಾನು ಅಸಹಾಯಕ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಆದರೆ, ನಾನು ಪ್ರಧಾನಿಯಾಗಿದ್ದ ಅವಧಿಯಲ್ಲಿ ಒಂದೇ ಒಂದು ಹಗರಣ ನಡೆದಿದೆ ಎಂದು ತೋರಿಸಿದರೆ ರಾಜಕೀಯವನ್ನೇ ಬಿಟ್ಟು ಬಿಡುತ್ತೇನೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.