ADVERTISEMENT

ನಾಗರಹೊಳೆ, ಬಂಡೀಪುರದಲ್ಲಿ ಕಾಳ್ಗಿಚ್ಚು: ಅರಣ್ಯ ಭಸ್ಮ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ಮೈಸೂರು: ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನ ದಲ್ಲಿ ಗುರುವಾರ ಕಾಣಿಸಿಕೊಂಡ ಕಾಳ್ಗಿಚ್ಚಿಗೆ ನೂರಾರು ಎಕರೆ ಅರಣ್ಯ ಭಸ್ಮವಾಗಿದೆ. ಏಕಕಾಲದಲ್ಲಿ ಎರಡೂ ಅರಣ್ಯಕ್ಕೆ ಬೆಂಕಿ ಬಿದ್ದಿದ್ದು, ಕಿಡಿಗೇಡಿಗಳ ಕೈವಾಡ ಇರಬಹುದು ಎಂದು ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮಾಲಾಪುರ ಸಮೀಪದ ಅರಣ್ಯ ಬೆಂಕಿಗೆ ಆಹುತಿಯಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮತ್ತಿಗೋಡು ಅರಣ್ಯ ಪ್ರದೇಶದಲ್ಲಿ ಬೆಂಕಿಯ ಕೆನ್ನಾಲಿಗೆ ಚಾಚಿದ್ದು ಅರಣ್ಯ, ಅಗ್ನಿ ಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾ ಚರಣೆ ಯಲ್ಲಿ ನಿರತರಾಗಿದ್ದಾರೆ.

ಗೋಣಿಕೊಪ್ಪಲು/ಹುಣಸೂರು ವರದಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮತ್ತಿಗೋಡು ಅರಣ್ಯದಲ್ಲಿ ಕಾಳ್ಗಿಚ್ಚಿಗೆ ನೂರಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿದೆ. ಮುಗಿಲೆತ್ತ ರಕ್ಕೆ ಬೆಳೆದಿರುವ ಮರಗಳ ನೆತ್ತಿಯ ವರೆಗೂ ಬೆಂಕಿಯ ಕೆನ್ನಾಲಿಗೆ ಚಾಚಿದ್ದು, ಜೋರಾಗಿ ಬೀಸುತ್ತಿರುವ ಗಾಳಿಗೆ ಕಾಳ್ಗಿಚ್ಚು ನಿಯಂತ್ರಣಕ್ಕೆ ಸಿಗುತ್ತಿಲ್ಲ.

ಮತ್ತಿಗೋಡು ಸಾಕಾನೆ ಶಿಬಿರದಿಂದ ಕೇವಲ 300 ಮೀಟರ್ ದೂರದಲ್ಲಿ ಕಾಣಿಸಿಕೊಂಡಿರುವ ಬೆಂಕಿ ಮಧ್ಯಾಹ್ನದ ಹೊತ್ತಿಗೆ ನೂರಾರು ಎಕರೆಗೆ ಹಬ್ಬಿದೆ. ಒಣಗಿದ ಬಿದಿರು ಬೆಂಕಿಗೆ ಸಿಡಿ ಯುತ್ತಿದ್ದು, ಗಾಳಿಯ ರಭಸಕ್ಕೆ ಮತ್ತಷ್ಟು ಹಬ್ಬುತ್ತಿದೆ.

ಮತ್ತಿಗೋಡು ಅರಣ್ಯದಿಂದ ಹತ್ತಾರು ಕಿ.ಮೀ. ದೂರದಲ್ಲಿರುವ ಮಾವ್ಕಲ್ ಅರಣ್ಯಕ್ಕೂ ಕಾಳ್ಗಿಚ್ಚು ಚಾಚಿದೆ.

ಹೀಗಾಗಿ, ಹುಣಸೂರು–ಗೋಣಿ ಕೊಪ್ಪಲು ನಡುವೆ ವಾಹನ ಸಂಚಾ ರವನ್ನು ಕೆಲ ಗಂಟೆಗಳ ಕಾಲ ಸ್ಥಗಿತ ಗೊಳಿಸಲಾಗಿತ್ತು. ಮುನ್ನೆಚ್ಚ ರಿಕೆಯ ಕ್ರಮವಾಗಿ ಕೆ.ಆರ್. ನಗರ, ಹುಣ ಸೂರು ಮಾರ್ಗವಾಗಿ ದಕ್ಷಿಣ ಕೊಡಗಿಗೆ ಹಾದು ಹೋಗಿರುವ ವಿದ್ಯುತ್ ಮಾರ್ಗದಲ್ಲಿ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.

ಬೆಂಕಿ ಆರಿಸಲು ಗೋಣಿಕೊಪ್ಪಲು, ಪಿರಿಯಾಪಟ್ಟಣ, ಹುಣಸೂರು ಮತ್ತು ಕುಶಾಲನಗರದಿಂದ ಅಗ್ನಿಶಾಮಕ ಸೇವೆಯ ವಾಹನಗಳು ಧಾವಿಸಿವೆ. ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸೇರಿ ನೀರು ಎರಚಿ, ಸೊಪ್ಪಿನಿಂದ ಬಡಿದು ಬೆಂಕಿಯನ್ನು ತಹಬಂದಿಗೆ ತರುವ ಪ್ರಯತ್ನ ನಡೆಯುತ್ತಿದೆ. ಆನೆ ಶಿಬಿರದ ಮಾವುತರು, ಕಾವಾಡಿಗಳು, ದಿನಗೂಲಿ ನೌಕರರು ಒಣಗಿದ ಕಸಕಡ್ಡಿಗಳನ್ನು ತೆಗೆದು ಬೆಂಕಿ ಮುಂದಕ್ಕೆ ಹರಡದಂತೆ ‘ಬೆಂಕಿ ರೇಖೆ’ ನಿರ್ಮಿಸುತ್ತಿದ್ದಾರೆ.

‘ಮತ್ತಿಗೋಡು ಸಾಕಾನೆ ಕೇಂದ್ರದ ಮುಖ್ಯರಸ್ತೆಯ ಬದಿಯಲ್ಲಿಯೇ ಬೆಂಕಿ ಕಾಣಿಸಿಕೊಂಡಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ದುಷ್ಕರ್ಮಿಗಳು ಬೆಂಕಿ ಇಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಕುರಿತು ತನಿಖೆ ನಡೆಸಿ  ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಡಿಸಿಎಫ್ ಡಾ.ಮಾಲತಿಪ್ರಿಯಾ ತಿಳಿಸಿದರು.

ಚಾಮರಾಜನಗರ ವರದಿ: ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಾಳ್ಗಿಚ್ಚಿಗೆ ನೂರಾರು ಎಕರೆ ಅರಣ್ಯ ಸುಟ್ಟು ಹೋಗಿದೆ. ಮೂಲಾಪುರ ಬಳಿಯ ಅರಣ್ಯದಲ್ಲಿರುವ ಮಂಗಲ ಜಲಾಶಯ ಪ್ರದೇಶದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಒಣಗಿ ನಿಂತಿರುವ ಬಿದಿರು, ಲಂಟಾನ  ಬೆಂಕಿಯ ಕೆನ್ನಾ ಲಿಗೆಗೆ ಭಸ್ಮವಾಗಿವೆ.

ಕಾಡಿನ ಅಂಚಿನಲ್ಲಿ ಆಡಿನಕಣಿವೆ ಎಂಬ ಗ್ರಾಮವಿದೆ. ಈ ಗ್ರಾಮದ ಕೆಲವು ವ್ಯಕ್ತಿಗಳು ಅರಣ್ಯದೊಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಮಂಗಲ ಜಲಾಶಯದಲ್ಲಿ ಮೀನು ಹಿಡಿಯುತ್ತಿದ್ದರು ಎನ್ನಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಯು ಇವರನ್ನು ಹಿಡಿಯಲು ಯತ್ನಿಸಿದ್ದಾರೆ. ಪರಾರಿ ಯಾಗಿರುವ ಈ ಕಿಡಿಗೇಡಿಗಳೇ ಕಾಡಿಗೆ ಬೆಂಕಿ ಹಚ್ಚಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಉದ್ಯಾನದಲ್ಲಿ ‘ಬೆಂಕಿ ರೇಖೆ’ ನಿರ್ಮಿ ಸಲಾಗಿದೆ. ಆದರೆ, ದುಷ್ಕರ್ಮಿಗಳು ಅರಣ್ಯದ ಮಧ್ಯದಲ್ಲಿರುವ ಬಿದಿರು ಮೆಳೆಗಳು ಹಾಗೂ ಲಂಟಾನ ಪೊದೆ ಗಳಿಗೆ ಬೆಂಕಿ ಹಾಕಿರುವ ಪರಿ ಣಾಮ ಬೆಂಕಿಯನ್ನು ತಹಬಂದಿಗೆ ತರಲು ಅರಣ್ಯ ಇಲಾಖೆಯ ಸಿಬ್ಬಂದಿ ಹರ ಸಾಹಸ ಪಡುವಂತಾಗಿದೆ.

ಸುದ್ದಿ ತಿಳಿದ ತಕ್ಷಣ ಗುಂಡ್ಲುಪೇಟೆ ಪಟ್ಟಣದಿಂದ ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ವಾಹನ ದೊಂದಿಗೆ ಬಂಡೀಪುರಕ್ಕೆ ತೆರಳಿದ್ದು, ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.

ಕಿಡಿಗೇಡಿಗಳ ಕೃತ್ಯ ಶಂಕೆ
‘ಉದ್ಯಾನದೊಳಕ್ಕೆ ಅನಧಿಕೃತವಾಗಿ ಪ್ರವೇಶಿಸಿ ಮೀನು ಹಿಡಿಯಲು ಯತ್ನಿಸುತ್ತಿದ್ದ ಕಿಡಿಗೇಡಿಗಳೇ ಬೆಂಕಿ ಹಚ್ಚಿರುವ ಸಾಧ್ಯತೆಯಿದೆ. ಬೆಂಕಿ ನಂದಿಸಲು ಶ್ರಮಿಸಲಾಗುತ್ತಿದೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಎಚ್‌.ಸಿ. ಕಾಂತರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.