ADVERTISEMENT

ನಾನೇನು ಸನ್ಯಾಸಿಯಲ್ಲ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ತುಮಕೂರು:  `ಇನ್ನೊಂದು ಸಲ ಮುಖ್ಯಮಂತ್ರಿ ಆಗಲ್ಲ ಅನ್ನೋಕೆ ನಾನೇನು ಸನ್ಯಾಸಿಯಲ್ಲ. ಅದೆಲ್ಲಾ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಈ ರಾಜ್ಯವನ್ನು ಮಾದರಿ ರಾಜ್ಯ ಮಾಡುವ ಆಸೆಯಂತೂ ಬೆಟ್ಟದಷ್ಟಿದೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮನದ ಇಂಗಿತ ಹೇಳಿಕೊಂಡರು.

ತಾಲ್ಲೂಕಿನ ಹೊನ್ನುಡಿಕೆ ಗ್ರಾಮದಲ್ಲಿ ಗುರುವಾರ ಗೂಳೂರು-ಹೆಬ್ಬೂರು ಹೋಬಳಿಗಳ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಾವು ಮುಖ್ಯಮಂತ್ರಿ ಆಗಿದ್ದ ಮೂರೂ ಮುಕ್ಕಾಲು ವರ್ಷ ಅವಧಿ ಒಂದು ಸರ್ಕಸ್ ಕಂಪೆನಿ ನಡೆಸಿದಂತೆ ಆಡಳಿತವನ್ನು ನಡೆಸಿದೆ ಎಂದು ತಮ್ಮನ್ನು ತಾವೇ ವಿಮರ್ಶಿಸಿಕೊಂಡರು.

`ಮುಖ್ಯಮಂತ್ರಿಯಾಗಿ ನನ್ನದು ಅಕ್ಷರಶಃ ತಂತಿ ಮೇಲಿನ ನಡಿಗೆಯಾಗಿತ್ತು. ಒಂದು ಕಡೆ ಕಾಂಗ್ರೆಸ್, ಇನ್ನೊಂದೆಡೆ ಜೆಡಿಎಸ್, ಎಲ್ಲವೂ ಸರಿಯಿದ್ದರೆ ನಮ್ಮವರೇ ನನ್ನನ್ನು ಎಳೆಯುತ್ತಿದ್ದರು~ ಎಂದು ಮುಗುಳ್ನಕ್ಕರು. `ಇನ್ನೂ 15 ವರ್ಷ ನನ್ನ ಕೈಕಾಲು ಗಟ್ಟಿಯಿರುತ್ತೆ. ಮನೆಯಲ್ಲಿ ಕೈಕಟ್ಟಿ ಕೂರುವುದಿಲ್ಲ. ಸಮಾಜಕ್ಕೆ ಬೆನ್ನು ಹಾಕದೆ ಕೆಲಸ ಮಾಡುತ್ತೇನೆ~ ಎಂದರು.

ಅತಿ ಮಹತ್ವದ ಯೋಜನೆಯ ಉದ್ಘಾಟನೆಗೆ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಿರಲಿಲ್ಲ. ಸಚಿವರಾದ ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಮುರುಗೇಶ ನಿರಾಣಿ, ಬಸವರಾಜ ಬೊಮ್ಮಾಯಿ, ರೇಣುಕಾಚಾರ್ಯ ಕಾರ್ಯಕ್ರಮದಲ್ಲಿದ್ದರು.

ಶಾಸಕ ಸುರೇಶ್‌ಗೌಡ, ಸಚಿವ ಬಸವರಾಜ ಬೊಮ್ಮಾಯಿ ಸಭೆಯಲ್ಲಿ ಯಡಿಯೂರಪ್ಪ ಅವರನ್ನು `ಮುಖ್ಯಮಂತ್ರಿ~ ಯಡಿಯೂರಪ್ಪ ಎಂದೇ ಸಂಬೋಧಿಸಿ ನಂತರ ನಗುತ್ತಾ ತಪ್ಪು ತಿದ್ದಿಕೊಂಡರು. ಒಂದು ಹಂತದಲ್ಲಿ ಯಡಿಯೂರಪ್ಪ ಅವರೂ `ನಾನು ಸಿ.ಎಂ ಆದೆ, ಅಲ್ಲಲ್ಲ ಆಗಿದ್ದೆ~ ಎಂದು ತಮ್ಮ ಸಚಿವ ಮಿತ್ರರನ್ನು ನೋಡಿ ಅರ್ಥಪೂರ್ಣ ನಗೆ ನಕ್ಕರು. 

ಇದಕ್ಕೂ ಮುನ್ನ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದಾಗ `ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಸ್ತುತ ಕೇವಲ ಶಿಕಾರಿಪುರ ಕ್ಷೇತ್ರದ ಸಾಮಾನ್ಯ ಶಾಸಕ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಉದ್ಘಾಟಿಸಬೇಕಿದ್ದ ಅಭಿವೃದ್ಧಿ ಕಾಮ ಗಾರಿಗಳನ್ನು ಉದ್ಘಾಟಿಸುತ್ತಿರುವುದು ಶಿಷ್ಟಾಚಾರದ ಉಲ್ಲಂಘನೆಯಲ್ಲವೇ?~ ಎಂಬ ಪತ್ರಕರ್ತರ ಪ್ರಶ್ನೆಗೆ ಕೋಪಿಸಿಕೊಂಡು ಹೊರ ನಡೆದರು.

ಮಠಕ್ಕೆ ಬಂದ ಈಶ್ವರಪ್ಪ:
ಸಂಜೆ ಕಾರ್ಯಕ್ರಮ ಮುಗಿಸಿದ ಯಡಿ ಯೂರಪ್ಪ ನೇರವಾಗಿ ಬೆಂಗಳೂರಿಗೆ ತೆರಳಿದರು. ಆದರೆ ಯಡಿಯೂರಪ್ಪ ಅತ್ತ ಹೋಗುತ್ತಿದ್ದಂತೆ ಇತ್ತ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸ್ವಾಮೀಜಿ ಅವರೊಂದಿಗೆ ಗೋಪ್ಯ ಮಾತುಕತೆ ನಡೆಸಿದರು. ಆದರೆ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, `ಮಠಕ್ಕೆ ಭೇಟಿ ನೀಡಿ ತುಂಬ ದಿನಗಳಾಗಿದ್ದವು. ಸ್ವಾಮೀಜಿ ಮತ್ತು ದೇವರ ದರ್ಶನಕ್ಕೆ ಬಂದಿದ್ದೆ~ ಎಂದರು.

 ಆದರೆ ತುಮಕೂರಿನ ಸಮೀಪ ಬಂದರೂ ಯಡಿಯೂರಪ್ಪ ಸಿದ್ದಗಂಗಾ ಮಠಕ್ಕೆ ಭೇಟಿ ನೀಡದೆ ಹೋಗಿದ್ದು ಅಚ್ಚರಿ ಉಂಟುಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT