ADVERTISEMENT

ನಾನೊಬ್ಬ ‘ಸಾಂದರ್ಭಿಕ ಶಿಶು’: ಮುಖ್ಯಮಂತ್ರಿ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ಮೇ 2018, 13:01 IST
Last Updated 23 ಮೇ 2018, 13:01 IST
ಎಚ್‌.ಡಿ.ಕುಮಾರಸ್ವಾಮಿ (ಚಿತ್ರ: ಎಎನ್‌ಐ ಟ್ವಿಟರ್‌)
ಎಚ್‌.ಡಿ.ಕುಮಾರಸ್ವಾಮಿ (ಚಿತ್ರ: ಎಎನ್‌ಐ ಟ್ವಿಟರ್‌)   

ಬೆಂಗಳೂರು: ನಾನೊಬ್ಬ ‘ಸಾಂದರ್ಭಿಕ ಶಿಶು’ ಆಗಿದ್ದೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹೇಳಿದರು.

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಚುನಾವಣೆಯಲ್ಲಿ ನಮಗೆ ಸ್ಪಷ್ಟ ಬಹುಮತ ಬರದೆ ಇದ್ದರೆ ನಾವು ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದಾಗಿ ಹೇಳಿದೆ. ಆದರೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದೆ. ರಾಷ್ಟ್ರೀಯ ನಾಯಕರು ನನ್ನನ್ನು ಮುಖ್ಯಮಂತ್ರಿಯಾಗುವಂತೆ ಮನವೊಲಿಸಿದರು. ಆದ ಕಾರಣ ನನ್ನ ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ ಅಧಿಕಾರ ವಹಿಸಿಕೊಂಡೆ. ಹಾಗಾಗಿ ಈಗ ನಾನು ‘ಸಾಂದರ್ಭಿಕ ಶಿಶು’ವಾಗಿದ್ದೇನೆ ಎಂದರು.

ADVERTISEMENT

‘ಮುಂದಿನ ದಿನಗಳಲ್ಲಿ  ಜೆಡಿಎಸ್‌– ಕಾಂಗ್ರೆಸ್‌ ಹೊಂದಾಣಿಕೆ ಸರಿ ಎನ್ನುವಂತಹ ರೀತಿಯಲ್ಲಿ ಆಡಳಿತ ನಡೆಸುತ್ತೇನೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

‘ರಾಜ್ಯದ ಎಲ್ಲ ವರ್ಗದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ನಮ್ಮದು ಅಸ್ಥಿರ ಸರ್ಕಾರ ಅಲ್ಲ’ ಎಂದರು.

ಸಾಲಮನ್ನಾ ನೀಲನಕ್ಷೆ ಸಿದ್ಧ: ನಮ್ಮ ಪಕ್ಷಕ್ಕೆ ಪೂರ್ಣ ಬಹುಮತ ದೊರೆತು, ನಾನು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಜನರಿಗೆ ಭರವಸೆ ನೀಡಿದ್ದೆ‌. ಆದರೆ ಸಮಿಶ್ರ ಸರ್ಕಾರ ರಚಿಸಿರುವುದರಿಂದ ಎಲ್ಲರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.

ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಅವರು ಈಗಾಗಲೇ ನೀಲನಕ್ಷೆ ಸಿದ್ಧಪಡಿಸಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.