ADVERTISEMENT

ನಾಯರಿ ಪಟ್ಟಿ ಸೇರಿದ ನಾಯರ್!

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST

ಬೆಂಗಳೂರು: ಮೇಲ್ವರ್ಗಕ್ಕೆ ಸೇರಿದ ನಾಯರ್ ಜನಾಂಗವನ್ನು ಹಿಂದುಳಿದ ವರ್ಗದ ಪಟ್ಟಿಯಿಂದ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ನಾಯರಿ ಸಂಘವು ಆಗ್ರಹಿಸಿದೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ ನಾಯರಿ, ಹಿಂದುಳಿದ ವರ್ಗಗಳ ಪ್ರವರ್ಗ-1ರ ಇಂಗ್ಲಿಷ್ ಪಟ್ಟಿಯಲ್ಲಿ ‘ನಾಯರ್/ನಾಯರಿ’ ಎಂದು (ಇವೆರಡೂ ಸಮುದಾಯ ಒಂದೇ ಎಂಬ ಅರ್ಥದಲ್ಲಿ) ನಮೂದಾಗಿದೆ, ಇದರಿಂದಾಗಿ ಮೇಲ್ಜಾತಿಗೆ ಸೇರಿದ ನಾಯರ್ ಸಮುದಾಯದವರೂ ಹಿಂದುಳಿದ ವರ್ಗಗಳಿಗೆ ಮಾತ್ರ ದೊರೆಯುವ ವಿಶೇಷ ಸವಲತ್ತುಗಳನ್ನು ಪಡೆಯುತ್ತಿದ್ದಾರೆ ಎಂದರು.

ನಾಯರಿ ಸಮುದಾಯದವರು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೂಲ ನಿವಾಸಿಗಳು, ಇದು ಹಿಂದುಳಿದ ಸಮುದಾಯ. ಈ ಸಮುದಾಯದ ಒಟ್ಟು ಜನಸಂಖ್ಯೆ ಇವತ್ತಿಗೂ ಮೂರು ಸಾವಿರಕ್ಕಿಂತ ಹೆಚ್ಚಿಲ್ಲ. ಆದರೆ ನಾಯರ್ ಎಂಬುದು ಮೇಲ್ವರ್ಗಕ್ಕೆ ಸೇರಿದ ಸಮುದಾಯ ಎಂದು ಅವರು ವಿವರಿಸಿದರು.

ಪ್ರವರ್ಗ-1ರ ಇಂಗ್ಲಿಷ್ ಪಟ್ಟಿಯಲ್ಲಿ ನಾಯರ್/ನಾಯರಿ ಎಂಬ ಎರಡೂ ಹೆಸರುಗಳು ನಮೂದಾಗಿದ್ದರೆ, ಇದರ ಕನ್ನಡ ಅವತರಣಿಕೆಯಲ್ಲಿ ‘ನಾಯರಿ’ ಎಂಬ ಸಮುದಾಯ ಸೂಚಕ ಪದವೇ ಕೈಬಿಟ್ಟುಹೋಗಿದೆ. ಕನ್ನಡದಲ್ಲಿ ‘ನಾಯರಿ’ ಸಮುದಾಯವನ್ನೂ ‘ನಾಯರ್’ ಸಮುದಾಯದೊಂದಿಗೆ ಗುರುತಿಸಲಾಗುತ್ತಿದೆ. ಇದರಿಂದ ‘ನಾಯರಿ’ ಸಮುದಾಯದ ಅಸ್ಮಿತೆಯೇ ಕಣ್ಮರೆಯಾಗುತ್ತಿದೆ ಎಂದರು.

‘ನಾಯರ್ ಮತ್ತು ನಾಯರಿ’ ಸಮುದಾಯವನ್ನು ಒಂದೇ ಜಾತಿ ಎಂದು ನಮೂದಿಸಿರುವುದರಿಂದ ಆಗಿರುವ ತಪ್ಪನ್ನು ಸರಿಪಡಿಸಬೇಕು ಎಂದು ಸಂಘದ ವತಿಯಿಂದ 2010ರ ನ. 20ರಂದು ರಾಜ್ಯ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರವನ್ನೂ ಬರೆದಿದ್ದೆವು. ಆದರೆ ಯಾವುದೇ ಪ್ರಯೋಜನ ಆಗಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.