ADVERTISEMENT

ನಾಲೆ ರಕ್ಷಣೆಗೆ ನೀರು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಜಲಾಶಯ ಆಸುಪಾಸಿನಲ್ಲಿ ಭಾರಿ ಮಳೆ ಬಿದ್ದ ಕಾರಣ, ನದಿ ನಾಲೆಗಳಿಗೆ ಉಂಟಾಗುವ ಸಂಭವನೀಯ ಅಪಾಯ ತಪ್ಪಿಸಲು ಜಲಾಶಯದ ನೀರಿನ ಹೊರ ಹರಿವನ್ನು ಸೋಮವಾರ ರಾತ್ರಿಯಿಂದ ಸ್ಥಗಿತಗೊಳಿಸಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ತಿಳಿಸಿವೆ.

ಜಲಾಶಯದ ಆಸುಪಾಸಿನಲ್ಲಿ ಸೋಮವಾರ ರಾತ್ರಿ 144 ಮಿ.ಮೀ ಮಳೆಯಾಗಿದೆ. ಇದರಿಂದ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ನಾಲೆಗಳಿಗೆ ನುಗ್ಗುತ್ತದೆ. ಹೀಗಾಗಿ ನಾಲೆಗಳಿಗೆ ಅಪಾಯವಾಗಬಾರದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ನೀರು ನಿಲ್ಲಿಸಲಾಗಿದೆ ಎನ್ನಲಾಗುತ್ತಿದೆ.

ಆದರೂ ವಿರಿಜಾ ನಾಲೆ ನಾಲ್ಕು ಕಡೆ, ಬಲದಂಡೆ ನಾಲೆ ಹಾಗೂ ದೇವರಾಯ ನಾಲೆ ತಲಾ ಒಂದು ಕಡೆ ಒಡೆದಿದ್ದು, ಅಂದಾಜು 350 ಎಕರೆ ಪ್ರದೇಶದಲ್ಲಿದ್ದ ಬೆಳೆ ನಷ್ಟವಾಗಿದೆ. ವಿರಿಜಾ ನಾಲೆಯು ಪಾಲಹಳ್ಳಿ, ರಂಗನತಿಟ್ಟು, ಬ್ರಹ್ಮಪುರ, ನಗುವಿನಹಳ್ಳಿ, ಬಲದಂಡೆ ನಾಲೆಯು ಬೆಳಗೋಳ ಬಳಿ ಹಾಗೂ ದೇವರಾಯ ನಾಲೆಯೂ ಬೆಳಗೋಳ ಬಳಿ ಒಡೆದು ಹೊಲಗಳಿಗೆ ನೀರು ನುಗ್ಗಿದೆ. ಪರಿಣಾಮ ಬತ್ತ, ತೆಂಗು, ಅಡಕೆ ಹಾಗೂ ಬಾಳೆ ಬೆಳೆಗಳು ನೆಲಕಚ್ಚಿವೆ.

ಶಾಸಕ ರಮೇಶಬಾಬು ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ತಹಶೀಲ್ದಾರ್ ಅರುಳ್‌ಕುಮಾರ್, ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕಂದಾಯ, ನೀರಾವರಿ, ತೋಟಗಾರಿಕೆ ಹಾಗೂ ಲೋಕೋಪಯೋಗಿ ಇಲಾಖೆಗಳ ತಂಡ ರಚನೆ ಮಾಡಲಾಗಿದೆ. ಸಮೀಕ್ಷೆ ಮಾಡಿದ ನಂತರ ನಷ್ಟದ ಪ್ರಮಾಣ ಖಚಿತವಾಗಿ ಗೊತ್ತಾಗಲಿದೆ ಎಂದು ಜಿಲ್ಲಾಧಿಕಾರಿ ಕೃಷ್ಣಯ್ಯ ಹೇಳಿದರು. ಒಡೆದಿರುವ ನಾಲೆಗಳನ್ನು ಒಂದು ವಾರದಲ್ಲಿ ದುರಸ್ತಿಗೊಳಿಸಲಾಗುವುದು ಎಂದು  ವಿಜಯಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.