ADVERTISEMENT

ನಾಳೆಯಿಂದ ಅಕ್ಕಿ ಗಿರಣಿ ಬಂದ್

ರಾಜ್ಯ ಸರ್ಕಾರದ ಲೆವಿ ನೀತಿಗೆ ಮಾಲೀಕರ ಸಂಘ ವಿರೋಧ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:30 IST
Last Updated 14 ಡಿಸೆಂಬರ್ 2013, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು/ದಾವಣಗೆರೆ: ಸರ್ಕಾರ ನಿಗದಿ ಮಾಡಿ­ರುವ ಪ್ರಮಾಣದಲ್ಲಿ ಲೆವಿ ಅಕ್ಕಿ ನೀಡಲು ಸಾಧ್ಯವಿಲ್ಲ ಎಂಬ ಕಾರಣ ಮುಂದಿಟ್ಟು ಡಿ. 16ರಿಂದ ಅನಿರ್ದಿಷ್ಟ ಅವಧಿಯವರೆಗೆ ಗಿರಣಿಗಳನ್ನು ಸ್ಥಗಿತಗೊಳಿಸಲು  ರಾಜ್ಯದ ಅಕ್ಕಿಗಿರಣಿಗಳ ಮಾಲೀಕರ ಸಂಘ ನಿರ್ಧರಿಸಿದೆ.

ಗಿರಣಿ ಮಾಲೀಕರು ಹಾಗೂ ಸರ್ಕಾರದ ನಡುವಿನ ಈ ಹಗ್ಗ ಜಗ್ಗಾಟದಿಂದ ಭತ್ತ ಬೆಳೆಗಾರರು ಹಾಗೂ ಗ್ರಾಹಕರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ.  

ರಾಜ್ಯದ 98.35 ಲಕ್ಷ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಿಸುವ ಉದ್ದೇಶಕ್ಕಾಗಿ ಸರ್ಕಾರ ಅಕ್ಕಿ ಸಂಗ್ರಹಕ್ಕೆ ಮುಂದಾಗಿದೆ.

ಪರಿಣಾಮ ಏನು?
*ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಲಭ್ಯತೆ ಕಡಿಮೆಯಾಗಿ ಬೆಲೆ ಏರಬಹುದು
*ಭತ್ತಕ್ಕೆ ಬೇಡಿಕೆ ಕಡಿಮೆಯಾಗಿ ದರ ಕುಸಿಯಬಹುದು
*ಪಶು ಆಹಾರಕ್ಕೆ ತೌಡಿನ ಅಭಾವ ಉಂಟಾಗಬಹುದು
*ಅಕ್ಕಿ ಗಿರಣಿಗಳನ್ನು ಅವಲಂಬಿಸಿದ ಲಕ್ಷಾಂತರ ಕುಟುಂಬಗಳಿಗೆ ತೊಂದರೆ
*ಸರ್ಕಾರದ ಪಡಿತರ ವ್ಯವಸ್ಥೆಗೆ ಬೇಕಾದ ಅಕ್ಕಿ ಪೂರೈಕೆ ಏರುಪೇರು

ಅದಕ್ಕಾಗಿ ರಾಜ್ಯದಲ್ಲಿರುವ 1,865 ಅಕ್ಕಿಗಿರಣಿಗಳಿಂದ ಬರುವ ‘ಮಾರ್ಚ್‌ ಒಳಗೆ 5 ಲಕ್ಷ ಟನ್‌’ ಅಕ್ಕಿಯನ್ನು ಲೆವಿ ರೂಪದಲ್ಲಿ ಸಂಗ್ರಹಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ 2 ಲಕ್ಷ ಟನ್‌ ಮಾತ್ರ ಲೆವಿ ಕೊಡಲು ನಿರ್ಧರಿಸಿದ್ದ ಅಕ್ಕಿಗಿರಣಿ ಮಾಲೀಕರ ಸಂಘ, ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಬಂದ್‌ಗೆ ಕರೆ ನೀಡಿದೆ.

ಬೆಂಗಳೂರಿನಲ್ಲಿ ಶನಿವಾರ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸರ್ಕಾರದ ಲೆವಿ ನೀತಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಲಾಯಿತು.

2013–14ನೇ ಸಾಲಿನಲ್ಲಿ 13.5 ಲಕ್ಷ ಟನ್‌ ಅಕ್ಕಿಯನ್ನು ಲೆವಿ ಮೂಲಕ ಸಂಗ್ರಹಿಸುವ ಸರ್ಕಾರದ ನಿರ್ಧಾರ ಅವೈಜ್ಞಾನಿಕ ಎಂದು ಸದಸ್ಯರು ಕಿಡಿ ಕಾರಿದರು.

ರಾಜ್ಯದಲ್ಲಿ ಪ್ರಸಕ್ತ ವರ್ಷ 37 ಲಕ್ಷ ಟನ್‌ ಭತ್ತ ಬೆಳೆಯಲಾಗಿದೆ. ಇದರಲ್ಲಿ ಶೇ 90ರಷ್ಟು ಸೋನಾಮಸೂರಿ, ನಲ್ಲೂರು ಸೋನಾ, ಶ್ರೀರಾಮ್‌, ಜಯಶ್ರೀ, ಅಮಾನ್‌ ಮುಂತಾದ ಸಣ್ಣ ತಳಿಯ ಭತ್ತವಾಗಿವೆ. ಈ ತಳಿಯ ಅಕ್ಕಿಗೆ ಮಾರುಕಟ್ಟೆಯಲ್ಲಿ ಪ್ರತಿ ಕಿಲೊಗೆ ರೂ 40 ದೊರೆಯುತ್ತದೆ. ಆದರೆ, ಸರ್ಕಾರ ಲೆವಿ ಅಕ್ಕಿಗೆ ನಿಗದಿ ಮಾಡಿರುವುದು ಕೇವಲ ರೂ 24.

ಈಗಿನ ನಿಯಮದ ಪ್ರಕಾರ ಅಕ್ಕಿಗಿರಣಿಗಳು ಹಲ್ಲಿಂಗ್‌ ಮಾಡುವ ಭತ್ತದಲ್ಲಿ ಶೇ 33ರಷ್ಟು ಅಕ್ಕಿಯನ್ನು ಸರ್ಕಾರಕ್ಕೆ ಲೆವಿ ರೂಪದಲ್ಲಿ ನೀಡಬೇಕಿದೆ.

‘ಸರ್ಕಾರದ ಪಡಿತರ ವಿತರಣೆಗೆ ದಪ್ಪ ಅಕ್ಕಿ ಬೇಕು. ಆದರೆ ಅದರ ಅಗತ್ಯದ ಶೇ 10ರಷ್ಟು ಭತ್ತವನ್ನೂ ಈ ಸಲ ರಾಜ್ಯದಲ್ಲಿ ಬೆಳೆದಿಲ್ಲ. ಸರ್ಕಾರ ನಿಗದಿ ಮಾಡಿದ ದರಕ್ಕೆ ಅಕ್ಕಿ ನೀಡಿದರೆ ಗಿರಣಿಗಳು ಬಾಗಿಲು ಮುಚ್ಚಬೇಕಾಗುತ್ತದೆ. ಒಂದು ಕ್ವಿಂಟಲ್‌ ಭತ್ತ ಹಲ್ಲಿಂಗ್‌ ಮಾಡಿದರೆ ಸರಾಸರಿ 68 ಕೆ.ಜಿ. ಅಕ್ಕಿ ಮಾತ್ರ ಬರುತ್ತದೆ. ಪ್ರತಿ ಕೆ.ಜಿ.ಗೆ ರೂ 2 ಹೆಚ್ಚಿಗೆ ಕೇಳಿದರೂ ಸರ್ಕಾರ ಸ್ಪಂದಿಸಿಲ್ಲ. ನಾವು 2 ಲಕ್ಷ ಟನ್‌ ಲೆವಿ ನೀಡಲು ಸಿದ್ಧರಿದ್ದೇವೆ. ಸರ್ಕಾರ ನಮಗೆ ಸ್ಪಂದಿಸಿಲ್ಲ. ಹಾಗಾಗಿ, ಬಂದ್‌ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ರಾಜ್ಯ ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಇಲ್ಲಿನ ಅಕ್ಕಿ ಬೆಲೆ ದುಬಾರಿ ಎಂಬ ಕಾರಣಕ್ಕೆ ಸರ್ಕಾರ ತಾತ್ಕಾಲಿಕ ಕ್ರಮವಾಗಿ ಹೊರ ರಾಜ್ಯದಿಂದ ಅಕ್ಕಿ ತರಿಸಲು ಹೋದರೆ ರಾಜ್ಯದ ಭತ್ತ ಬೆಳೆಗಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ರೈತ ಮುಖಂಡ ತೇಜಸ್ವಿ ವಿ. ಪಟೇಲ್‌ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT