ADVERTISEMENT

ನಿಧನ ವಾರ್ತೆ:ವಿ.ಎನ್. ಸುಬ್ಬರಾವ್

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ಬೆಂಗಳೂರು:  ಹಿರಿಯ ಪತ್ರಕರ್ತ ವಿ.ಎನ್.ಸುಬ್ಬರಾವ್  (81) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ನಿಧನರಾದರು .ಅವರು ಕನ್ನಡ ಮತ್ತು ಇಂಗ್ಲಿಷ್ ಪತ್ರಿಕಾರಂಗದಲ್ಲಿ ಆರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ತೀವ್ರ ಅನಾರೋಗ್ಯಕ್ಕೆ ಗುರಿಯಾಗಿದ್ದ ಅವರು ಕೆಲ ತಿಂಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು.

ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಬೆಂಗಳೂರಿನ ಬನಶಂಕರಿಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.ಅವರ ವೃತ್ತಿ ಜೀವನ `ಮೇನಕಾ~ ಎಂಬ ಸಿನಿಮಾ ನಿಯತಕಾಲಿಕೆಯಿಂದ ಆರಂಭವಾಯಿತು.

ನಂತರ ಇಂಗ್ಲಿಷ್ ಮತ್ತು ಕನ್ನಡ ದಿನ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದರು. 1981ರಲ್ಲಿ `ಇಂಡಿಯನ್ ಎಕ್ಸ್‌ಪ್ರೆಸ್~ ಪತ್ರಿಕೆಯನ್ನು ತೊರೆದು, `ಸಂಡೆ ಮಿಡ್ ಡೇ~ ಪತ್ರಿಕೆಯಲ್ಲಿ ಸ್ಥಾನಿಕ ಸಂಪಾದಕರಾದರು. 1984ರಲ್ಲಿ ಮತ್ತೆ `ಇಂಡಿಯನ್ ಎಕ್ಸ್‌ಪ್ರೆಸ್~ಪತ್ರಿಕೆಗೆ ಮರಳಿದರು.

ತರುವಾಯ ಟೈಮ್ಸ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್, ನ್ಯೂಸ್ ಟೈಮ್ಸ, ಸಂಯುಕ್ತ ಕರ್ನಾಟಕ, ಸ್ಕ್ರೀನ್, ತಾರಾಲೋಕ ಹೀಗೆ ಹಲವು ಪತ್ರಿಕೆಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು. ಸಿನಿಮಾ ಪತ್ರಕರ್ತರಾಗಿಯೂ ದುಡಿದಿದ್ದ ಸುಬ್ಬರಾವ್, ಎಂಬತ್ತರ ದಶಕದಲ್ಲಿ ಹಾವು ಏಣಿ ಆಟ, ಪ್ರೇಮಾಯಣ ಎಂಬ ಕನ್ನಡ ಚಿತ್ರಗಳನ್ನು ನಿರ್ಮಿಸಿದರು. ನಂತರ ಮಗನೊಂದಿಗೆ ಜಾಹಿರಾತು ಏಜೆನ್ಸಿಯನ್ನು ಆರಂಭಿಸಿದ್ದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರೂ ಆಗಿದ್ದರು. ಸುಚಿತ್ರಾ ಫಿಲ್ಮ್ ಸೊಸೈಟಿಗೂ ಅಧ್ಯಕ್ಷರಾದರು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರಾದ ಗೋವಿಂದ ಎಂ. ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತ ಕುಮಾರ್, ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆ ತಾರಾ ಅನುರಾಧ ಅವರು ಸುಬ್ಬರಾವ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.