ADVERTISEMENT

ನಿಯಮ ಉಲ್ಲಂಘಿಸಿ ವಿದ್ಯುತ್ ಉತ್ಪಾದನೆ!

​ಪ್ರಜಾವಾಣಿ ವಾರ್ತೆ
Published 4 ಜೂನ್ 2012, 19:30 IST
Last Updated 4 ಜೂನ್ 2012, 19:30 IST

ಹುಬ್ಬಳ್ಳಿ: ನೆರೆಯ ಗದಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಪವನ ವಿದ್ಯುತ್‌ಯಂತ್ರಗಳು ಇದೀಗ ಧಾರವಾಡ ಜಿಲ್ಲೆಗೂ ಕಾಲಿರಿಸತೊಡಗಿವೆ. ಆದರೆ, ಇವುಗಳ ಪೈಕಿ ಬಹುತೇಕ ಜಿಲ್ಲಾಡಳಿತದ ಅನುಮತಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.

ಕುಂದಗೋಳ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕಳೆದ ಒಂದು ವರ್ಷದಿಂದ ಪವನ ವಿದ್ಯುತ್ ಉತ್ಪಾದನಾ ಯಂತ್ರಗಳ ಸ್ಥಾಪನೆ ಕಾರ್ಯ ಭರದಿಂದ ನಡೆದಿದೆ. ಈ ಮೂಲಕ ಜಿಲ್ಲೆಯಲ್ಲಿ ಪವನ ವಿದ್ಯುತ್ ಉತ್ಪಾದನೆಗೆ ಚಾಲನೆ ದೊರೆತಿದೆ. ಆದರೆ, ಈ ಯಂತ್ರವನ್ನು ಜಮೀನಿನಲ್ಲಿ ಸ್ಥಾಪಿಸುವ ಮುನ್ನ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಬಳಸುವ ಕುರಿತು ಅನುಮತಿ ಪಡೆಯಬೇಕಾಗುತ್ತದೆ. ಹೀಗೆ ಜಿಲ್ಲಾಡಳಿತದಿಂದ ಈವರೆಗೆ ಕೇವಲ ಒಂದೇ ಒಂದು ಯಂತ್ರ ಸ್ಥಾಪನೆಗೆ ಅನುಮತಿ ಪಡೆದುಕೊಳ್ಳಲಾಗಿದೆ. ಆದರೆ 16 ಯಂತ್ರಗಳನ್ನು ಅಳವಡಿಸಲಾಗಿದೆ.

ಪುಣೆ-ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಮಳಲಿ, ರಾಮನಕೊಪ್ಪ, ಗುರುವಿನಹಳ್ಳಿ, ಜಿಗಳೂರು, ಕುಕನೂರು, ಬಳ್ಳಿಗಟ್ಟಿ, ರಾಮಾಪುರ ಮೊದಲಾದ ಗ್ರಾಮಗಳ ಜಮೀನುಗಳಲ್ಲಿ ಈ ಯಂತ್ರಗಳ ಸ್ಥಾಪನೆಯಾಗಿದೆ. ಖಾಸಗಿ ಕಂಪೆನಿಗಳು ಇಲ್ಲಿ ರೈತರ ಜಮೀನನ್ನು ಖರೀದಿಸಿ, ಯಂತ್ರಗಳನ್ನು ಅಳವಡಿಸಿ, ವಿದ್ಯುತ್ ಉತ್ಪಾದಿಸಲಾರಂಭಿಸಿವೆ. ಕುಂದಗೋಳ ತಹಸೀಲ್ದಾರ್ ಬಸವರಾಜು ಮೆಳವಂಕಿ ನೀಡುವ ಮಾಹಿತಿ ಪ್ರಕಾರವೇ ಇಲ್ಲಿ 16 ಯಂತ್ರಗಳು ತಲೆ ಎತ್ತಿವೆ.

ಇವುಗಳ ಪೈಕಿ ಒಂದು ಯಂತ್ರದ ಮಾಲೀಕರು ಮಾತ್ರ ಕೃಷಿಯೇತರ ಚಟುವಟಿಕೆಗೆ (ಎನ್‌ಎ) ಪ್ರಮಾಣಪತ್ರ ಪಡೆದಿದ್ದಾರೆ. ಉಳಿದ ಜಮೀನುಗಳಲ್ಲಿ ಜಿಲ್ಲಾಡಳಿತದ ಅನುಮತಿ ಪಡೆಯದೇ ವಿದ್ಯುತ್ ಯಂತ್ರ ಸ್ಥಾಪಿಸಿದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಎರಡು ತಿಂಗಳ ಹಿಂದೆಯೇ ಸಂಬಂಧಿಸಿದ ಕಂಪೆನಿ ಹಾಗೂ ಜಮೀನಿನ ಮೂಲ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದೆ. ಇದುವರೆಗೂ ಅದಕ್ಕೆ ಯಾರಿಂದಲೂ ಉತ್ತರ ಬಂದಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಕುಂದಗೋಳ ತಹಸೀಲ್ದಾರ್ ಬಸವರಾಜು ಮೆಳವಂಕಿ ತಿಳಿಸಿದರು.

ರೈತರ ಪ್ರಕಾರ ಎಕರೆಗೆ ರೂ 8-10 ಲಕ್ಷ ದರದಲ್ಲಿ ಜಮೀನು ಖರೀದಿ ನಡೆದಿದೆ. `ಪವನ ವಿದ್ಯುತ್ ಉತ್ಪಾದನಾ ಕಂಪೆನಿಗಳ ಆಸಕ್ತಿ ತಿಳಿಯುತ್ತಿದ್ದಂತೆಯೇ ಮಧ್ಯವರ್ತಿಗಳು ಸಹ ನಮ್ಮ ಊರುಗಳಿಗೆ ಕಾಲಿರಿಸಿದ್ದಾರೆ. ಕಂಪೆನಿ ಹಾಗೂ ಭೂಮಾಲೀಕರ ನಡುವೆ ವ್ಯವಹಾರ ಕುದುರಿಸಿ ತಾವು ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸುತ್ತಾರೆ ಗುರುವಿನಹಳ್ಳಿ ಗ್ರಾಮದ ಬಸವರಾಜ.

`ಅನುಮತಿ ಇಲ್ಲದೆ ಉತ್ಪಾದನೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಒಂದು ಕಂಪೆನಿಗೆ ಈಗಾಗಲೇ ದಂಡವನ್ನೂ ವಿಧಿಸಲಾಗಿದೆ. ತಹಸೀಲ್ದಾರ್ ವರದಿ ಆಧರಿಸಿ ಕ್ರಮ ಜರುಗಿಸುತ್ತೇವೆ ~ ಎಂದು ಜಿಲ್ಲಾಧಿಕಾರಿ ದರ್ಪಣ್ ಜೈನ್ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.