ADVERTISEMENT

ನಿಷೇಧಿತ ಜಾಗಕ್ಕೆ ನುಗ್ಗಲು ಯತ್ನ: ಲಾಠಿ ಪ್ರಹಾರ

ಸಂಘರ್ಷದ ಮಧ್ಯೆ ದತ್ತ ಪಾದುಕೆ ದರ್ಶನ ಪಡೆದ ಭಕ್ತರು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ಚಿಕ್ಕಮಗಳೂರು: ದತ್ತ ಜಯಂತಿ ಪ್ರಯುಕ್ತ ತಾಲ್ಲೂಕಿನ ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾದ ಪೀಠಕ್ಕೆ ನಾಡಿನ ಮೂಲೆಮೂಲೆಯಿಂದ ದತ್ತ ಮಾಲೆ ಧರಿಸಿ ಇರುಮುಡಿ ಹೊತ್ತು ಬಂದಿದ್ದ ಸಹಸ್ರಾರು ದತ್ತ ಮಾಲಾ­ಧಾರಿಗಳು, ಶ್ರದ್ಧಾ ಭಕ್ತಿಯಿಂದ ದತ್ತಾತ್ರೇಯ ಸ್ವಾಮಿಯ ಪಾದುಕೆಗಳ ದರ್ಶನ ಪಡೆದರು.

ಮಾಲಾಧಾರಿಗಳಲ್ಲಿ ಕೆಲವರು ನಿಷೇಧಿತ ಜಾಗಕ್ಕೆ ನುಗ್ಗಲು ಮತ್ತು ಭಗವಾಧ್ವಜ ಕಟ್ಟಲು ಯತ್ನಿಸಿದಾಗ ಪೊಲೀಸರು ಬಲ ಪ್ರಯೋಗಿಸಿ ತಡೆದ ಘಟನೆಯೂ ನಡೆಯಿತು.

ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ದತ್ತ ಜಯಂತಿ ಉತ್ಸವ ಸೋಮವಾರ ಸಣ್ಣಪುಟ್ಟ ಘಟನೆ ಹೊರತುಪಡಿಸಿ, ಬಹುತೇಕ ಶಾಂತಿಯುತ ತೆರೆಕಂಡಿತು.

ಪಾದುಕೆಗಳ ದರ್ಶನಕ್ಕೆ ಬಂದಿದ್ದ ಮಾಲಾಧಾರಿಗಳಲ್ಲಿ ಕೆಲವರು ನಿಷೇ ಧಿತ ಪ್ರದೇಶದ ಒಳಗೆ ನುಗ್ಗಿ ಭಗವಾ ಧ್ವಾಜ ಕಟ್ಟಲು ಯತ್ನಿಸಿದರು. ಅದೇ ಸಂದರ್ಭ­ದಲ್ಲಿ ದತ್ತಾತ್ರೇಯ ಉತ್ಸವ ಮೂರ್ತಿಯ ಅಡ್ಡೆ ಹೊತ್ತು ಬರುತ್ತಿದ್ದ ಮಾಲಾಧಾರಿಗಳು ಪೊಲೀ ಸರ ಸರ್ಪಗಾವಲು ಮತ್ತು ರಕ್ಷಣಾ ಬೇಲಿ ಭೇದಿಸಿ, ಪೀಠದ ಬಲ ಭಾಗದ ನಿಷೇಧಿತ ಪ್ರದೇಶಕ್ಕೆ ನುಗ್ಗಲು ಯತ್ನ ನಡೆಸಿದರು.

ಆಗ ಪೊಲೀಸರು ಬಲ ಪ್ರಯೋಗಿಸಿ ಗುಂಪು ಚದುರಿಸಿದರು. ಒಂದಷ್ಟು ಮಂದಿ ಮಾಲಾಧಾರಿಗಳಿಗೆ ಲಾಠಿ ಏಟು ಬಿದ್ದವು. ನೂಕಾಟದಲ್ಲಿ ಪೊಲೀಸರು ಆಯತಪ್ಪಿ ನೆಲಕ್ಕೆ ಬಿದ್ದರು. ಶಾಸಕ ಸಿ.ಟಿ.ರವಿ ಮಧ್ಯಪ್ರವೇಶಿಸಿ, ಆಕ್ರೋಶ­ಗೊಂಡಿದ್ದ ದತ್ತಮಾಲಾಧಾರಿ­ಗಳನ್ನು ಸಮಾಧಾನಪಡಿಸಿ ಹೋಮ ನಡೆಯುತ್ತಿದ್ದ ಸ್ಥಳಕ್ಕೆ ಕರೆದೊಯ್ದರು.

ರಸ್ತೆ ಬಂದ್‌: ಮಧ್ಯಾಹ್ನದ ನಂತರ ಮಹಿಳೆ­ಯೊಬ್ಬರಿಗೆ ಪೊಲೀಸರು ಹಲ್ಲೆ ಮಾಡಿದರು ಎಂದು ಆರೋಪಿಸಿ ಸಕಲೇಶಪುರದ ಕಡೆಯಿಂದ ಬಂದಿದ್ದ ವಿಎಚ್‌ಪಿ ಮತ್ತು ಬಜರಂಗದಳ ಕಾರ್ಯಕರ್ತರು ಸುಮಾರು ಒಂದು ತಾಸಿಗೂ ಹೆಚ್ಚು ಹೊತ್ತು ಪೀಠದ ಸಮೀಪ ರಸ್ತೆ ಬಂದ್‌ ಮಾಡಿ, ಪ್ರತಿಭಟನೆ ನಡೆಸಿದರು. ಪೊಲೀಸರ ವಿರುದ್ಧ ಮಾಲಾಧಾರಿಗಳ ಆಕ್ರೋಶ, ಧಿಕ್ಕಾರದ ಘೋಷಣೆ ಮುಗಿಲು ಮುಟ್ಟಿತ್ತು.

ಎರಡೂ ಕಡೆಯಿಂದಲೂ ವಾಹನ ಸಂಚಾರಕ್ಕೆ ಅವಕಾಶ ನೀಡದಂತೆ ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸಿ, ರಸ್ತೆ ಮೇಲೆ ಅಡ್ಡಡ್ಡ ಮಲಗಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಸಂಚಾರಕ್ಕೆ ಮತ್ತು ಪಾದುಕೆಗಳ ದರ್ಶನಕ್ಕೆ ಬಂದಿದ್ದ ಮಾಲಾಧಾರಿಗಳಿಗೆ ತೀವ್ರ ಅಡಚಣೆ­ಯಾಯಿತು. ಕೊನೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಪಿ.ಹೊನಕೇರಿ ಮತ್ತು ಮಂಗಳೂರು ಎಸಿಪಿ ಡಾ.ಶಿವ ಕುಮಾರ್‌ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರ ಪರವಾಗಿ ಕ್ಷಮೆ ಯಾಚಿಸಿದರು. ನಂತರ ದತ್ತ ಮಾಲಾ­ಧಾರಿಗಳು ಪ್ರತಿಭಟನೆ ಕೈಬಿಟ್ಟರು.

ಇದಕ್ಕೂ ಮೊದಲು ಬೆಳಿಗ್ಗೆ ನಗರ ದಿಂದ ವಾಹನಗಳಲ್ಲಿ ಹೊರಟ ಮಾಲಾಧಾರಿಗಳು ಮಾರ್ಗ ಮಧ್ಯೆ ಸಿಗುವ ಹೊನ್ನಮ್ಮನ ಹಳ್ಳದಲ್ಲಿ ಪವಿತ್ರ ಸ್ನಾನ ಮಾಡಿ, ಇರುಮುಡಿ ಹೊತ್ತು ಪೀಠಕ್ಕೆ ಕಾಲ್ನಡಿಗೆಯಲ್ಲಿ ಸಾಗಿದರು.

ದತ್ತ ಭಜನೆ, ದೇಶ ಭಕ್ತಿ ಘೋಷಣೆ ಕೂಗುತ್ತಾ ಸರದಿ ಸಾಲಿನಲ್ಲಿ ನಿಂತು ಗುಹೆ ಪ್ರವೇಶಿಸಿದ ಭಕ್ತರು ಪಾದುಕೆಗಳ ದರ್ಶನ ಪಡೆದರು. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಬೆಂಗಳೂರು, ಚಿಕ್ಕಬಳ್ಳಾಪುರ, ಚಿತ್ರ ದುರ್ಗ, ಬಳ್ಳಾರಿ, ಹುಬ್ಬಳ್ಳಿ ಸೇರಿ ದಂತೆ ವಿವಿಧ ಜಿಲ್ಲೆಗಳಿಂದ ದತ್ತಮಾ ಲಾಧಾ ರಿಗಳು ಬಂದಿದ್ದರು.

ಪೀಠಕ್ಕೆ ಹೋಗುವ ಮಾರ್ಗದಲ್ಲಿ ಅಂದಾಜು ಒಂದೂವರೆ ಕಿ.ಮೀ. ದೂರದವರೆಗೂ ಮಾಲಾಧಾರಿಗಳ ಸರದಿ ಸಾಲು ಇತ್ತು. ಬೆಳಿಗ್ಗೆಯಿಂದ ಸಂಜೆವರೆಗೂ ಭಕ್ತರ ಸಂಖ್ಯೆ ಒಂದೇ ಸಮನೆ ಪೀಠದತ್ತ ಬರುತ್ತಲೇ ಇತ್ತು. ಈ ಬಾರಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು ಕಂಡುಬಂತು. ಪೊಲೀಸರ ಅಂದಾಜಿನ ಪ್ರಕಾರ ಸುಮಾರು 15 ಸಾವಿರಕ್ಕೂ ಹೆಚ್ಚು ಯಾತ್ರಿಕರು ಪೀಠಕ್ಕೆ ಭೇಟಿ ನೀಡಿದರು.

ಬೆಳಿಗ್ಗೆ ದರ್ಶನ ಶುರುವಾದಾಗ ಕಲ್ಯಾಣ ನಗರದ ದೊಡ್ಡಕುರು ಬರಹಳ್ಳಿ ಮಠದ ಜಯಬಸವಾನಂದ ಸ್ವಾಮೀಜಿ, ಶಂಕರದೇವರ ಮಠದ ಚಂದ್ರಶೇಖರ ಸ್ವಾಮೀಜಿ, ಕಡೂರಿನ ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಪಾದುಕೆಗಳಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ಮೌನವ್ರತದಲ್ಲಿದ್ದ ಬೆಂಗ ಳೂರಿನ ಶ್ರೀಧರಾಶ್ರಮದ ಆತ್ಮಾನಂದ ಸರಸ್ವತಿ ಸ್ವಾಮೀಜಿ ದತ್ತ ಗುಹೆಯಲ್ಲಿ ಸುಮಾರು ಒಂದು ತಾಸು ಸಂಕಲ್ಪ ಮಾಡಿ, ಧ್ಯಾನಸಕ್ತರಾಗಿ ಕುಳಿತ ಪ್ರಸಂಗವೂ ನಡೆಯಿತು.

ಶಾಸಕರಾದ ಸಿ.ಟಿ.ರವಿ, ಡಿ.ಎನ್‌. ಜೀವರಾಜ್‌, ಸುನಿಲ್‌­ಕುಮಾರ್‌, ಬಜರಂಗದಳ ರಾಜ್ಯ  ಸಂಚಾಲಕ ಸೂರ್ಯ ನಾರಾಯಣ, ವಿಎಚ್‌ಪಿ ಮುಖಂಡರಾದ ಶಿವಶಂಕರ್‌, ಕೇಶವ ಹೆಗ್ಡೆ, ಶ್ರೀಕಾಂತ ಪೈ ಇನ್ನಿತರರು ಮಾಲಾಧಾರಿಗಳಾಗಿ ಪಾದುಕೆಗಳ ದರ್ಶನ ಪಡೆದರು.

ಪೀಠಕ್ಕೆ ಹೋಗುವ ಮಾರ್ಗ ದುದ್ದಕ್ಕೂ ಪೊಲೀಸ್ ಸರ್ಪಗಾವಲು ಇತ್ತು. ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಅಭಿಷೇಕ್‌ ಗೋಯಲ್‌, ಜಿಲ್ಲಾ ಧಿಕಾರಿ ಬಿ.ಎಸ್‌.ಶೇಖರಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಪಿ. ಹೊನಕೇರಿ, ಮುಜರಾಯಿ ತಹಶೀ ಲ್ದಾರ್ ಭಾಗ್ಯ ಲಕ್ಷ್ಮಿ, ಕಾರ್ಮಿಕ ಇಲಾಖೆ ಆಯುಕ್ತೆ ಶ್ರೀವಳ್ಳಿ ಇನ್ನಿತರ ಅಧಿ ಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಮಾಡಿದ್ದರು.
 

ಇನ್ನಷ್ಟು ಸುದ್ದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.