ADVERTISEMENT

‘ನೀತಿ ಸಂಹಿತೆ ಹೆಸರಲ್ಲಿ ಹಕ್ಕಿನ ಉಲ್ಲಂಘನೆ’

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST

ಬೆಂಗಳೂರು: ‘ಪಂಚಾಯ್ತಿ ಚುನಾವಣೆಗಳ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಾದ ದಿನದಿಂದಲೇ ಮದ್ಯದಂಗಡಿ ಮುಚ್ಚಬೇಕು ಎಂಬ ಆದೇಶ ಸಂವಿಧಾನ ಬಾಹಿರ’ ಎಂದು ಆಕ್ಷೇಪಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.

‘ಈ ಕುರಿತಂತೆ ಕರ್ನಾಟಕ ಪಂಚಾಯತ್ ರಾಜ್‌ ಕಾಯ್ದೆ–2015ರ ಕಲಂ 308 ಎಸಿ(ಸಿ)ಗೆ ತರಲಾಗಿರುವ ತಿದ್ದುಪಡಿಯನ್ನು ರದ್ದುಪಡಿಸಲು ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಗ್ರಾಮದ ಅಕ್ಷಯ ಬಾರ್ ಅಂಡ್ ರೆಸ್ಟೋರೆಂಟ್‌ನ ರೋಹಿತ್‌ ಕುಮಾರ್ ಶೆಟ್ಟಿ ಮತ್ತು ಸಿದ್ದಾಪುರ ಮತ್ತು ಅಜ್ರಿ ಗ್ರಾಮದ ಒಟ್ಟು ಐದು ಬಾರ್ ಮಾಲೀಕರು ಈ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

‘ರಾಜ್ಯ ಸರ್ಕಾರ ಪಂಚಾಯತ್‌ ರಾಜ್‌ ಕಾಯ್ದೆಗೆ 2015ರ ಡಿಸೆಂಬರ್ 31ರಂದು ತಿದ್ದುಪಡಿ ಮಾಡಿದೆ. ಈ ಕುರಿತಂತೆ 2016ರ ಫೆಬ್ರುವರಿ 25ರಂದು ಗೆಜೆಟ್ ಪ್ರಕಟಣೆ ಹೊರಡಿಸಿದೆ. ಇದರ ಅನುಸಾರ, ಪಂಚಾಯ್ತಿ ಚುನಾವಣೆ ವೇಳೆ ಚುನಾವಣೆ ನಡೆಯುವ ಕ್ಷೇತ್ರದ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಮುಕ್ತಾಯವಾಗುವತನಕ ಮದ್ಯದಂಗಡಿ ಹಾಗೂ ಮದ್ಯ ತಯಾರಿಕಾ ಘಟಕಗಳನ್ನು ಜಿಲ್ಲಾಧಿಕಾರಿ ಮೊಹರು ಹಾಕಿ ಬಂದ್ ಮಾಡಬೇಕು’ ಎಂದು ವಿವರಿಸಲಾಗಿದೆ.

‘ಇದು ನಮ್ಮ ಮೂಲಭೂತ ಹಕ್ಕಿನ ಉಲ್ಲಂಘನೆ. ನೀತಿ ಸಂಹಿತೆ ಜಾರಿಯಾದ ದಿನದಿಂದ ಮುಕ್ತಾಯವಾಗುವತನಕ ವ್ಯಾಪಾರ, ವಹಿವಾಟು ಬಂದ್ ಮಾಡಿದರೆ ನಮ್ಮ ಗತಿಯೇನು. ಈ ದಿಸೆಯಲ್ಲಿ ಪಂಚಾಯತ್ ರಾಜ್‌ ಕಾಯ್ದೆಗೆ ತರಲಾಗಿರುವ ತಿದ್ದುಪಡಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ. ಆದ್ದರಿಂದ ಈ ತಿದ್ದುಪಡಿ ಕಲಂ ಅನ್ನು ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ಅರ್ಜಿ ವಿಚಾರಣೆಗೆ ಬಂದಿತ್ತು. ವಿಚಾರಣೆಯನ್ನು ಇದೇ 11ಕ್ಕೆ ಮುಂದೂಡಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ, ಉಡುಪಿ ಜಿಲ್ಲಾಧಿಕಾರಿ ಹಾಗೂ ಉಡುಪಿ ಜಿಲ್ಲಾ ಅಬಕಾರಿ ಕಮಿಷನರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.