ADVERTISEMENT

ನೀವು ಪಕ್ಷಪಾತಿ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 20:00 IST
Last Updated 20 ಜನವರಿ 2011, 20:00 IST

 ಬೆಂಗಳೂರು: ‘ಕಳ್ಳನೇ ಪೊಲೀಸರಿಗೆ ದೂರು ನೀಡಿದಂತಾಗಿದೆ’ ಎಂಬ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ಪ್ರತಿಭಟನಾ ಪತ್ರ ಬರೆದಿದ್ದಾರೆ. ‘ನೀವು ಪಕ್ಷಪಾತಿ’ ಎಂದು ನೇರವಾಗಿ ರಾಜ್ಯಪಾಲರ ಮೇಲೆ ಟೀಕಾಪ್ರಹಾರ ನಡೆಸಿದ್ದಾರೆ.

ಗುರುವಾರ ಬೆಳಿಗ್ಗೆ ರಾಜ್ಯಪಾಲರು ನೀಡಿದ್ದ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ರಾತ್ರಿ ರಾಜ್ಯಪಾಲರಿಗೆ ಪ್ರತಿಭಟನಾ ಪತ್ರ ಬರೆದ ಮುಖ್ಯಮಂತ್ರಿ, ಭಾರದ್ವಾಜ್‌ಗೆ ತಿರುಗೇಟು ನೀಡಿದರು.

‘ನನ್ನ ಮತ್ತು ಗೃಹ ಸಚಿವರ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವಂತೆ ಕೋರಿರುವ ಜಸ್ಟೀಸ್ ಲಾಯರ್ಸ್ ಫೋರಂ ಸದಸ್ಯರ ಮನವಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಬುಧವಾರದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅದನ್ನು ಪತ್ರಮುಖೇನ ನಿಮ್ಮ ಗಮನಕ್ಕೆ ತರಲಾಗಿತ್ತು. ಈ ಬಗ್ಗೆ ಪರಿಶೀಲಿಸುವುದನ್ನು ಬಿಟ್ಟು ನಮ್ಮ ವಿರುದ್ಧ ಮತ್ತೆ ಟೀಕೆ ಮಾಡಿರುವುದು ಸರಿಯಲ್ಲ’ ಎಂದು ಪತ್ರದಲ್ಲಿ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

‘ನಿಮ್ಮ ಹೇಳಿಕೆಯಲ್ಲಿ ಸಚಿವ ಸಂಪುಟವನ್ನು ‘ಕಳ್ಳ’ ಎಂದು ಬಿಂಬಿಸಿದ್ದೀರಿ. ಈ ಹೇಳಿಕೆಯ ಮೂಲಕ ಮುಖ್ಯಮಂತ್ರಿ, ಸಚಿವ ಸಂಪುಟ ಮತ್ತು ಕರ್ನಾಟಕದ ಮತದಾರರ ಘನತೆಯನ್ನು ಕುಗ್ಗಿಸುವ ಪ್ರಯತ್ನ ಮಾಡಿದ್ದೀರಿ’ ಎಂದಿದ್ದಾರೆ.

‘ಪದೇ ಪದೇ ನೀವು ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ ಈ ವಿಷಯದಲ್ಲಿ ನೀವು ನಿಷ್ಪಕ್ಷಪಾತ, ಮುಕ್ತ ಮತ್ತು ಪ್ರಾಮಾಣಿಕ ನಿರ್ಧಾರ ಕೈಗೊಳ್ಳುತ್ತೀರಿ ಎಂಬ ನಂಬಿಕೆ ಬರುವುದಿಲ್ಲ. ನೀವು ನಿರಂತರವಾಗಿ ಸರ್ಕಾರವನ್ನು ಮುಜುಗರಕ್ಕೆ ಒಳಪಡಿಸುತ್ತಿದ್ದೀರಿ. ನೀವು ಸರ್ಕಾರದ ವಿರುದ್ಧ ಪಕ್ಷಪಾತ ಧೋರಣೆ ಹೊಂದಿದ್ದೀರಿ ಎಂಬುದು ಎದ್ದು ಕಾಣುತ್ತಿದೆ’ ಎಂದು ರಾಜ್ಯಪಾಲರನ್ನು ಟೀಕಿಸಿದ್ದಾರೆ.

ಪತ್ರದಲ್ಲಿ ಪ್ರತಿಭಟನೆ: ‘ನಿಮ್ಮ ಪಕ್ಷಪಾತಿ ನಿಲುವಿನಿಂದ ಸರ್ಕಾರ ಮತ್ತು ರಾಜ್ಯದ ಜನತೆಗೆ ನೋವಾಗಿದೆ. ನಿಮ್ಮ ಹೇಳಿಕೆಗಳ ವಿರುದ್ಧ ಪತ್ರದ ಮೂಲಕ ನನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದೇನೆ’ ಎಂದು ಯಡಿಯೂರಪ್ಪ ನೇರವಾಗಿ ಹೇಳಿದ್ದಾರೆ.

‘ನನ್ನ ಮತ್ತು ಗೃಹ ಸಚಿವರ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ಕೋರಿರುವ ವಕೀಲರ ಅರ್ಜಿಯ ವಿಷಯದಲ್ಲಿ ನೀವು ಪಕ್ಷಪಾತಿ ಆಗಿದ್ದೀರಿ ಎಂಬುದು ಸಾಬೀತಾಗಿದೆ. ಆದ್ದರಿಂದ ವಕೀಲರ ಮನವಿಯ ಪರಿಶೀಲನೆಯಿಂದ ಹಿಂದಕ್ಕೆ ಸರಿಯಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.