ADVERTISEMENT

ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಸಮಾವೇಶದಲ್ಲಿ ಬಿ.ಎಸ್.ಯಡಿಯೂರಪ್ಪ ಗುರುವಂದನಾ ಕಾರ್ಯ ನೆರೆವೇರಿಸಿದರು. ಬಿ.ಎಸ್‌. ಸೋಮಶೇಖರ್‌, ಗಾಯತ್ರಿಪೀಠದ ದಯಾನಂದಪುರಿ ಸ್ವಾಮೀಜಿ, ಗುಳೇದಗುಡ್ಡ ಗುರುಸಿದ್ದೇಶ್ವರ ಮಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಹರಿಹರ ಸಿದ್ಧಾಶ್ರಮದ ಪ್ರಭುಲಿಂಗ ಸ್ವಾಮೀಜಿ, ಹಳೆಹುಬ್ಬಳ್ಳಿಯ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಇದ್ದಾರೆ –ಪ್ರಜಾವಾಣಿ ಚಿತ್ರ
ಸಮಾವೇಶದಲ್ಲಿ ಬಿ.ಎಸ್.ಯಡಿಯೂರಪ್ಪ ಗುರುವಂದನಾ ಕಾರ್ಯ ನೆರೆವೇರಿಸಿದರು. ಬಿ.ಎಸ್‌. ಸೋಮಶೇಖರ್‌, ಗಾಯತ್ರಿಪೀಠದ ದಯಾನಂದಪುರಿ ಸ್ವಾಮೀಜಿ, ಗುಳೇದಗುಡ್ಡ ಗುರುಸಿದ್ದೇಶ್ವರ ಮಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಹರಿಹರ ಸಿದ್ಧಾಶ್ರಮದ ಪ್ರಭುಲಿಂಗ ಸ್ವಾಮೀಜಿ, ಹಳೆಹುಬ್ಬಳ್ಳಿಯ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ನೇಕಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ನೇಕಾರರಿಗೆ ಶೂನ್ಯ ಬಡ್ಡಿದರದಲ್ಲಿ ₹10 ಲಕ್ಷ ಸಾಲ ಒದಗಿಸಬೇಕು ಹಾಗೂ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಮಹಾಸಭಾದ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ಒತ್ತಾಯಿಸಿದರು.

ಮಹಾಸಭಾ ವತಿಯಿಂದ ಇಲ್ಲಿ ಭಾನುವಾರ ಆಯೋಜಿಸಿದ್ದ ಗುರುವಂದನಾ ಹಾಗೂ ನೇಕಾರರ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 60 ಲಕ್ಷ ನೇಕಾರರು ಇದ್ದಾರೆ. 45 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನಲ್ಲಿ ನೇಕಾರರ ಮತಗಳೇ ನಿರ್ಣಾಯಕ. ಆದರೂ ರಾಜ್ಯದಲ್ಲಿ ನೇಕಾರರಿಗೆ ಯಾವುದೇ ರೀತಿಯ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ನಮ್ಮ ಸಮುದಾಯಕ್ಕೆ ಎಲ್ಲ ರೀತಿಯ ನೆರವನ್ನು ನೀಡಿತ್ತು. ಆದರೆ, ಈಗಿನ ಸರ್ಕಾರ ನಮ್ಮ ಸಮುದಾಯಕ್ಕೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ’ ಎಂದು ದೂರಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ‘ಮುಂದಿನ ಬಾರಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಅಧಿಕಾರ ಸಿಕ್ಕ ಆರು ತಿಂಗಳಲ್ಲಿಯೇ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಿ, ₹100 ಕೋಟಿ ಅನುದಾನ ನೀಡುತ್ತೇನೆ. ಬೆಂಗಳೂರಿನಲ್ಲಿ ನೇಕಾರ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಒದಗಿಸುತ್ತೇನೆ. ಕಟ್ಟಡ ನಿರ್ಮಾಣಕ್ಕೆ ₹5 ಕೋಟಿ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ದೇಶದಲ್ಲಿ ಕೃಷಿ ನಂತರದ ಸ್ಥಾನ ನೇಕಾರಿಕೆಗೆ ಇದೆ. ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ನೇಕಾರರು ಇಂದಿಗೂ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಸೌಲಭ್ಯಗಳು ಅವರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ನೇಕಾರರ ಎಲ್ಲ ಉಪ ಸಮುದಾಯಗಳು ಒಂದಾದಾಗ ಮಾತ್ರ ರಾಜಕೀಯ ಪ್ರಾತಿನಿಧ್ಯ ಸಿಗಲಿದೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ‘ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಲ್ಲಿದ್ದಾಗ ಬಿ.ಎಸ್‌. ಯಡಿಯೂರಪ್ಪ ಅವರು ನಿಮ್ಮ ಸಮುದಾಯದ ಮುಖಂಡ ಎಂ.ಡಿ.ಲಕ್ಷ್ಮೀನಾರಾಯಣ ಅವರನ್ನು ಬೆಳೆಸಿದರು. ಆದರೆ, ಅವರಿಗೆ ನಿಮ್ಮ ಸಮುದಾಯದ ಮಹಾನ್ ಪುರುಷ ಯಾರು ಎಂಬುದೇ ಗೊತ್ತಿರಲಿಲ್ಲ’ ಎಂದು ಅವರು ವ್ಯಂಗ್ಯವಾಡಿದರು.

ಮಹಾಸಭಾದ ಪ್ರಮುಖ ಬೇಡಿಕೆಗಳು

* ನೇಕಾರಿಕೆಯಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ಅಧಿಕಾರಿಗಳು ನೇಕಾರರಿಗೆ ನೀಡುತ್ತಿರುವ ಕಿರುಕುಳ ತಪ್ಪಿಸಬೇಕು

* ನಗರದಲ್ಲಿ ನೇಕಾರ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಬೇಕು

* ನೇಕಾರಿಕೆಯಲ್ಲಿ ತೊಡಗಿರುವವರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು

* ಆಗಸ್ಟ್‌ 7ರ ಕೈಮಗ್ಗ ದಿನಾಚರಣೆಯನ್ನು ನೇಕಾರರ ದಿನಾಚರಣೆ ಎಂದು ಘೋಷಿಸಬೇಕು

* ದೊಡ್ಡಬಳ್ಳಾಪುರ, ಆನೇಕಲ್, ನೆಲಮಂಗಲ, ರಾಮದುರ್ಗ, ಗುಳೇದಗುಡ್ಡ ಮತ್ತು ಇಳಕಲ್‌ನಲ್ಲಿ ನೇಕಾರರಿಗಾಗಿ ಬಡಾವಣೆ ನಿರ್ಮಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.