ದಾವಣಗೆರೆ: ಸರ್ಕಾರ ಉರುಳಿಸುವ ಇರಾದೆ ಏನೂ ನನಗಿಲ್ಲ. ಅವರೇ ಉರುಳಿಸುತ್ತಾರೆ ಎಂದರೆ ನಾನೇನು ಹೇಳಲಿ. ತಾವೇ ನೇಣು ಹಾಕಿಕೊಳ್ಳುವವರಿಗೆ ಏನೆಂದು ಹೇಳಬಹುದು...? - ಹೀಗೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯ ಬಿಜೆಪಿ ಸರ್ಕಾರವನ್ನು ಸೋಮವಾರ ಚುಚ್ಚಿದರು.
ಇಲ್ಲಿನ ವಿಧಾನ ಪರಿಷತ್ ಮಾಜಿ ಸದಸ್ಯ ಮುದೇಗೌಡ್ರ ವೀರಭದ್ರಪ್ಪ ಅವರ ಮನೆಗೆ ಔಪಚಾರಿಕ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ಸರ್ಕಾರ ಅವಧಿಗೆ ಮುನ್ನವೇ ವಿಸರ್ಜನೆಗೊಳ್ಳಬಹುದೇ ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.
ಈಶ್ವರಪ್ಪ ಸುತ್ತಿ ಬಳಸಿ ಮಾತನಾಡಬಾರದು. ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗಲಿ. ಜನ ಯಾರನ್ನು ಬೇಕೋ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಶಾಸಕರು ತನ್ನ ಜತೆ ಬಂದ ತಕ್ಷಣ ಸರ್ಕಾರ ಬೀಳುವುದಿಲ್ಲ. ತಮ್ಮ ಜತೆ ಗುರುತಿಸಿಕೊಂಡವರ ಮೇಲೆ ಶಿಸ್ತುಕ್ರಮ ಅನ್ನುತ್ತಿದ್ದಾರೆ. ಆದರೆ, ಶ್ರೀರಾಮುಲು ಜತೆ ಗುರುತಿಸಿಕೊಂಡವರ ಮೇಲೆ ಏಕೆ ಶಿಸ್ತುಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದರು.
ಮುಂದಿನ ತಿಂಗಳು ಹಾವೇರಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ತಾವು ಯಾರ ಮೇಲೂ ಒತ್ತಡ ಹೇರುವುದಿಲ್ಲ. ಬರುವವರಿಗೆ ಮುಕ್ತ ಅವಕಾಶವಿದೆ. ಯಾರೂ ಬರದೇ ಹೋದರೆ ಹೊಸಮುಖಗಳಿಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ವಿಷಾದ: ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರಿಗೆ ಧಿಕ್ಕಾರ ಕೂಗಿದ್ದು, ಬಳಿಕ ಕ್ಷಮೆ ಕೇಳಿದ ಬಗ್ಗೆ ಪ್ರಶ್ನಿಸಿದಾಗ, ವಾಸ್ತವವಾಗಿ ಸಂಸತ್ ಸದಸ್ಯ ಅನಂತಕುಮಾರ್ ಮೇಲೆ ಆಕ್ರೋಶವಿತ್ತು. ಅದನ್ನು ವ್ಯಕ್ತಪಡಿಸುವಾಗ ಅಡ್ವಾಣಿ ಅವರ ಹೆಸರು ಸೇರಿಹೋಯಿತು. ಈ ಪ್ರಮಾದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.