ADVERTISEMENT

ನೈಸ್ ಪರ ನಿರ್ಧಾರದಿಂದ ಬೊಕ್ಕಸಕ್ಕೆ ನಷ್ಟ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 19:30 IST
Last Updated 21 ಜುಲೈ 2012, 19:30 IST

ಬೆಂಗಳೂರು: ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಸಂಸ್ಥೆಗೆ (ನೈಸ್) ಮುದ್ರಾಂಕ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಿರುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 56 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಶನಿವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದರು.

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯಲ್ಲಿ (ಬಿಎಂಐಸಿಪಿ) ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ತಾವು ಸಲ್ಲಿಸಿರುವ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸುವಂತೆ ವಾದ ಮಂಡಿಸಿದ ಅವರು, `ನೈಸ್ ಸಂಸ್ಥೆಗೆ ಉಪನಗರ ನಿರ್ಮಾಣಕ್ಕೆ ನೀಡುವ ಭೂಮಿಗೆ ಮುದ್ರಾಂಕ ಶುಲ್ಕದಿಂದ ವಿನಾಯಿತಿ ನೀಡಲು ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.

ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಈ ಪ್ರಸ್ತಾವವನ್ನು ಮಂಡಿಸಿದ್ದರು. ನಿರ್ಧಾರವನ್ನು ಕೈಗೊಂಡಿದ್ದರು. ಈ ತೀರ್ಮಾನದಿಂದ ರಾಜ್ಯದ ಬೊಕ್ಕಸಕ್ಕೆ 56 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ರಾಜ್ಯದಲ್ಲಿ ಬೇರೆ ಯಾವುದೇ ಖಾಸಗಿ ಸಂಸ್ಥೆಗೆ ಈ ಮಾದರಿಯ ವಿನಾಯಿತಿ ನೀಡಿದ ಉದಾಹರಣೆ ಇಲ್ಲ~ ಎಂದು ತಿಳಿಸಿದರು.

`ಲೋಕೋಪಯೋಗಿ ಇಲಾಖೆಯ ಶಿಫಾರಸಿನ ಅನ್ವಯ, ಐದು ಟೌನ್‌ಶಿಪ್‌ಗಳ ನಿರ್ಮಾಣಕ್ಕೆ ಒಟ್ಟು 5,850 ಎಕರೆ ಭೂಮಿಯ ನೋಂದಣಿ ಶುಲ್ಕ ಹಾಗೂ ಮುದ್ರಾಂಕ ಶುಲ್ಕ ಪಾವತಿಸುವುದರಿಂದ ನೈಸ್ ಸಂಸ್ಥೆಗೆ ರಾಜ್ಯ ಸಚಿವ ಸಂಪುಟ ವಿನಾಯಿತಿ ನೀಡಿತು.

ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಅವರು 14,337 ಎಕರೆ ಖಾಸಗಿ ಭೂಮಿ ಸ್ವಾಧೀನ ಹಾಗೂ ಇದಕ್ಕೆ ಸಂಬಂಧಿಸಿದ ಮುದ್ರಾಂಕ ಶುಲ್ಕ ಪಾವತಿಯಿಂದ ವಿನಾಯಿತಿ ಕೋರಿದರು. ಬಿಎಂಐಸಿಪಿ ವಿಶೇಷ ಜಿಲ್ಲಾಧಿಕಾರಿ ಅನೀಸ್ ಸಿರಾಜ್ ಇದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ. ಖೇಣಿ ಅವರ ಮನವಿಗೆ ಪೂರಕವಾಗಿ 2002ರ ಸೆಪ್ಟೆಂಬರ್ 21ರಂದು ಆದೇಶ ಸಹ ಹೊರಡಿಸಲಾಯಿತು ಎಂದು ಅಬ್ರಹಾಂ ನ್ಯಾಯಾಲಯಕ್ಕೆ ತಿಳಿಸಿದರು.

ಮೂಲ ಒಪ್ಪಂದ ಉಲ್ಲಂಘಿಸಿ ಚತುಷ್ಪಥದ ಬದಲು ದ್ವಿಪಥ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಹಣಕಾಸು ಇಲಾಖೆ 2002ರ ಅಕ್ಟೋಬರ್‌ನಲ್ಲಿ ಕಂದಾಯ ಇಲಾಖೆಗೆ ಪತ್ರ ಬರೆಯಿತು. ಈ ಕಾರಣದಿಂದ ಸಂಸ್ಥೆಗೆ ನೀಡಲಾದ ವಿನಾಯಿತಿ ಕುರಿತು ಮರುಪರಿಶೀಲನೆ ನಡೆಸಬೇಕು ಎಂದೂ ಪತ್ರದಲ್ಲಿ ಹೇಳಲಾಗಿದೆ.

ದ್ವಿಪಥ ರಸ್ತೆಯ ನಿರ್ಮಾಣವನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಬೇಕು. ಇದು ಸಾಧ್ಯವಾಗದಿದ್ದರೆ, ರಸ್ತೆ ಶುಲ್ಕ (ಟೋಲ್) ಸಂಗ್ರಹಿಸಲು ಅವಕಾಶ ನೀಡಬಾರದು ಎಂಬ ಸಲಹೆ ಕೂಡ ಪತ್ರದಲ್ಲಿ ಇದೆ. ಆದರೆ ಈ ಪತ್ರವನ್ನು ನಿರ್ಲಕ್ಷಿಸಲಾಯಿತು ಎಂದು ಅಬ್ರಹಾಂ ನ್ಯಾಯಾಲಯಕ್ಕೆ ತಿಳಿಸಿದರು. ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.