ADVERTISEMENT

ನ್ಯಾ.ಮಜಗೆ ನೇಮಕ ಊರ್ಜಿತಗೊಳಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST

ಬೆಂಗಳೂರು:  ಉಪ ಲೋಕಾಯುಕ್ತರನ್ನಾಗಿ ನ್ಯಾಯಮೂರ್ತಿ ಎಸ್.ಬಿ.ಮಜಗೆ ಅವರನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಸೋಮವಾರ ಮಾನ್ಯ ಮಾಡಿದೆ.

ಇವರ ನೇಮಕ ಪ್ರಶ್ನಿಸಿ ಚಿಕ್ಕಬಳ್ಳಾಪುರದ ನಿವಾಸಿ ಪಿ. ಸುಬ್ರಹ್ಮಣ್ಯ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಜಾ ಮಾಡಿದೆ.

ಹೈಕೋರ್ಟ್ ಮಾರ್ಗಸೂಚಿಗೆ ಅನುಗುಣವಾಗಿ ನೇಮಕ ನಡೆದಿಲ್ಲ ಎನ್ನುವುದು ಅರ್ಜಿದಾರರ ದೂರಾಗಿತ್ತು. ಉಪ ಲೋಕಾಯುಕ್ತರಾಗಿದ್ದ ನ್ಯಾ.ಚಂದ್ರಶೇಖರ ಅವರ ನೇಮಕವನ್ನು ರದ್ದು ಮಾಡಿದ ಸಂದರ್ಭದಲ್ಲಿ ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರ ನೇಮಕವನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಹೈಕೋರ್ಟ್ ಮಾರ್ಗಸೂಚಿ ರೂಪಿಸಿದೆ. ನ್ಯಾ.ಮಜಗೆ ಅವರ ನೇಮಕ ಅದಕ್ಕೆ ಅನುಗುಣವಾಗಿ ನಡೆದಿಲ್ಲ ಎಂದು ಅವರು ದೂರಿದ್ದರು.

ನಿಯಮಗಳಿಗೆ ಅನುಗುಣವಾಗಿಯೇ ನ್ಯಾ.ಮಜಗೆ ಅವರ ನೇಮಕ ನಡೆದಿದೆ ಎಂಬ ಬಗ್ಗೆ ಸರ್ಕಾರದ ಪರ ವಕೀಲ ಬಿ.ವೀರಪ್ಪ ದಾಖಲೆಗಳನ್ನು ನೀಡಿದರು.  ಇವರ ನೇಮಕಕ್ಕೆ ರಾಜ್ಯಪಾಲರ ಅನುಮೋದನೆ ದೊರಕಿರುವ ಬಗ್ಗೆಯೂ ಅವರು ಮಾಹಿತಿ ನೀಡಿದರು. ಇದನ್ನು ಪೀಠ ಮಾನ್ಯ ಮಾಡಿತು.

ಅರ್ಜಿಯಲ್ಲಿ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳು, ಅದನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದರು. ಅರ್ಜಿ ಹಿಂದಕ್ಕೆ ಪಡೆದುಕೊಂಡ ಕಾರಣ, ಅದನ್ನು ವಜಾಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.