ADVERTISEMENT

ನ್ಯಾಯಾಲಯಕ್ಕೆ ಇಂದು ರೆಡ್ಡಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 19:30 IST
Last Updated 16 ಆಗಸ್ಟ್ 2012, 19:30 IST

ಬಳ್ಳಾರಿ:  ಗಡಿ ಗುರುತು ನಾಶ ಮತ್ತು ಜೀವ ಬೆದರಿಕೆ ಆರೋಪ ಕುರಿತ ದೂರಿನ ವಿಚಾರಣೆ ನಡೆಸುತ್ತಿರುವ ಜಿಲ್ಲೆಯ ಸಂಡೂರು ನ್ಯಾಯಾಲಯಕ್ಕೆ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಶುಕ್ರವಾರ ಮೊದಲ ಬಾರಿಗೆ ಹಾಜರಾಗಲಿದ್ದಾರೆ.


ಸಿಬಿಐನಿಂದ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಜನಾರ್ದನ ರೆಡ್ಡಿ ಅವರಿಗೆ ನ್ಯಾಯಾಲಯ ಇದೇ 12ರಂದು ಹೊರಡಿಸಿರುವ ವಾರೆಂಟ್ ಅನ್ನು ಪೊಲೀಸರು ಜಾರಿ ಮಾಡಿದ್ದಾರೆ. ಅವರನ್ನು ಸಂಡೂರಿಗೆ ಕರೆ ತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.

ಗುರುವಾರ ಮಧ್ಯಾಹ್ನವೇ ಬೆಂಗಳೂರಿನಿಂದ ಹೊರಟ ಪೊಲೀಸರು ರೆಡ್ಡಿ ಅವರನ್ನು ರಾತ್ರಿ 8.40ರ ಸುಮಾರಿಗೆ ಬಳ್ಳಾರಿಯ ಕಾರಾಗೃಹಕ್ಕೆ ಕರೆದುಕೊಂಡು ಬಂದರು.

ಘಟನೆಯ ವಿವರ:  ಗಣಿ ಉದ್ಯಮಿ, ತುಮಟಿ ಮೈನ್ಸ್ ಮಾಲೀಕ ಟಪಾಲ್ ನಾರಾಯಣ ರೆಡ್ಡಿ ಅವರು 2006ರ ಸೆಪ್ಟೆಂಬರ್ 10ರಂದು ತೋರಣಗಲ್ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಇದುವರೆಗೆ ಒಮ್ಮೆಯೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಈ ಕುರಿತು ನ್ಯಾಯಾಲಯ ಅವರ ವಿರುದ್ಧ 10 ಬಾರಿ ವಾರೆಂಟ್ ಜಾರಿ ಮಾಡಿದೆ.

ಆಂಧ್ರಪ್ರದೇಶದ ರಾಯದುರ್ಗ ಶಾಸಕ ರಾಮಚಂದ್ರ ರೆಡ್ಡಿ, ಓಎಂಸಿ ಗಣಿ ವ್ಯವಸ್ಥಾಪಕ ಲಕ್ಷ್ಮಿಪ್ರಸಾದ್ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಅವರು ನ್ಯಾಯಾಲಯಕ್ಕೆ ಹಾಜರಾಗಿ, ಜಾಮೀನು ಪಡೆದಿದ್ದಾರೆ.

ಈ ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯ ಅನೇಕ ಬಾರಿ ವಾರೆಂಟ್ ಜಾರಿ ಮಾಡಿತ್ತು. ಆದರೆ, ಮೊದಲ ಆರೋಪಿಯಾಗಿರುವ ರಾಮಚಂದ್ರರೆಡ್ಡಿ ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ದೋಷಾರೋಪ ಪಟ್ಟಿ ಪರಿಗಣಿಸಿದ್ದ ಹೈಕೋರ್ಟ್, ಆರೋಪಗಳ ಕುರಿತು ಮೇಲ್ನೋಟಕ್ಕೆ ಕಂಡುಬರುವ ಅಂಶಗಳ ಬಗ್ಗೆ ಹೊಸದಾಗಿ ವಿಚಾರಣೆ ನಡೆಸುವಂತೆ ಆದೇಶಿಸಿದ್ದರಿಂದ ಸಂಡೂರಿನ ಜೆಎಂಎಎಫ್‌ಸಿ ನ್ಯಾಯಾಲಯ ವಿಚಾರಣೆ  ನಡೆಸುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT