ಬಳ್ಳಾರಿ: ಸಿಬಿಐ ಬಂಧನದಲ್ಲಿರುವ ಅರಣ್ಯಾಧಿಕಾರಿ ಎಸ್.ಮುತ್ತಯ್ಯ ಅವರನ್ನು ನಾಲ್ಕು ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಸಂಭವಿಸಿದ ಪ್ರಕರಣದ ವಿಚಾರಣೆಗಾಗಿ ಗುರುವಾರ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಬುಧವಾರ ರಾತ್ರಿಯೇ ಮುತ್ತಯ್ಯ ಅವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಕರೆತಂದಿದ್ದ ಪೊಲೀಸರು, ಗುರುವಾರ ಮುಂಜಾನೆ 11ಕ್ಕೆ ಜಿಲ್ಲಾ ನ್ಯಾಯಾಧೀಶೆ ಎಂ.ಜಿ. ಉಮಾ ಅವರ ಮುಂದೆ ಹಾಜರುಪಡಿಸಿದರು. ಮುತ್ತಯ್ಯ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಬಾಡಿ ವಾರೆಂಟ್ ಜಾರಿಯಾಗಿತ್ತು.
ಮಾಜಿ ಸಚಿವ ಎಂ.ದಿವಾಕರ ಬಾಬು, ತುಮುಟಿ ಮೈನ್ಸ್‌ನ ಟಪಾಲ್ ಗಣೇಶ್ ಸೇರಿದಂತೆ ಒಟ್ಟು 29 ಜನರ ವಿರುದ್ಧ, ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಅತಿಕ್ರಮ ಪ್ರವೇಶ, ಪೀಠೋಪಕರಣ ಧ್ವಂಸ, ಹಲ್ಲೆ ಯತ್ನ ಹಾಗೂ ಪ್ರಾಣ ಬೆದರಿಕೆ ಆರೋಪ ಕುರಿತು ಮುತ್ತಯ್ಯ ದೂರು ನೀಡಿದ್ದರು.
ಜಿಲ್ಲೆಯ ಸಂಡೂರು ತಾಲ್ಲೂಕಿನ ತುಮಟಿ, ವಿಠಲಾಪುರ ಬಳಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ 2008ರ ಅಕ್ಟೋಬರ್ 15ರಂದು ಮಧ್ಯಾಹ್ನ ಅರಣ್ಯ ಇಲಾಖೆ ಕಚೇರಿ ಮುಂದೆ ಮೇಲ್ಕಂಡ ಆರೋಪಿಗಳು ಪ್ರತಿಭಟನೆ ನಡೆಸಿದ್ದರು.
`ಪ್ರತಿಭಟನೆ ವೇಳೆ ಈ ಎಲ್ಲ 29 ಆರೋಪಿಗಳು ಕಚೇರಿ ಅತಿಕ್ರಮ ಪ್ರವೇಶ ಮಾಡಿ, ಒಳಗೆ ನಡೆಯುತ್ತಿದ್ದ ಸಭೆಗೆ ಅಡ್ಡಿಪಡಿಸಿದ್ದಲ್ಲದೆ, ಸಭೆಯಲ್ಲಿದ್ದ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಪ್ರಾಣ ಬೆದರಿಕೆಯನ್ನೂ ಹಾಕಿದ್ದರು~ ಎಂದು ಆರೋಪಿಸಿ ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮುತ್ತಯ್ಯ ಅವರು ಬ್ರೂಸ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದಿವಾಕರ ಬಾಬು ಮತ್ತಿತರರನ್ನು ಬಂಧಿಸಲಾಗಿತ್ತು.
ಆರೋಪಿಗಳೆಲ್ಲ ನ್ಯಾಯಾಲಯಕ್ಕೆ ಹಾಜರಾಗಿದ್ದು, ದೂರು ನೀಡಿರುವ ಮುತ್ತಯ್ಯ ಅವರನ್ನು ಸಾಕ್ಷ್ಯ ನುಡಿಯುವಂತೆ ಸಮನ್ಸ್ ಜಾರಿಗೊಳಿಸಿದ್ದರಿಂದ ಅವರನ್ನು ಬಳ್ಳಾರಿಗೆ ಕರೆತರಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶರ ಮುಂದೆ ಮುತ್ತಯ್ಯ ಘಟನೆ ಕುರಿತು ವಿವರ ನೀಡಿದರು. ನಂತರ ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಲಾಯಿತು. 25 ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಅರಣ್ಯಾಧಿಕಾರಿ ಶುಕ್ಲಾ ಒಳಗೊಂಡಂತೆ 10 ಅಧಿಕಾರಿಗಳು ಈ ಹಿಂದೆಯೇ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ.
ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಯ ಗಣಿ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ಇತ್ತೀಚೆಗೆ ಮುತ್ತಯ್ಯ ಅವರನ್ನು ಬಂಧಿಸಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದ ಅವರನ್ನು 18ರ ವರೆಗೆ ಬಳ್ಳಾರಿಯ ಕಾರಾಗೃಹದಲ್ಲೇ ಇರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.