ಬಳ್ಳಾರಿ: ಇದೇ 27ರಿಂದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ‘ಮೆರಿಟ್ 360’ ಸಮಾವೇಶದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಲು ಇಲ್ಲಿನ ಬಿಐಟಿಎಂ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಎಂ. ಶರಣಬಸವ ಆಯ್ಕೆಯಾಗಿದ್ದಾರೆ.
ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿ ವಿಶ್ವಸಂಸ್ಥೆಯ ಸಹಯೋಗದಲ್ಲಿ ಈ ಸಮಾವೇಶ ನಡೆಯಲಿದೆ. ಜಾಗತಿಕ ಮಟ್ಟದಲ್ಲಿ ಗುರುತಿಸಲಾಗಿರುವ 17 ಪ್ರಮುಖ ಕ್ಷೇತ್ರಗಳ ಪೈಕಿ, ‘ಕೈಗಾರಿಕೆ, ಸಂಶೋಧನೆ ಮತ್ತು ಮೂಲಸೌಕರ್ಯ’ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಅವರು, ತ್ಯಾಜ್ಯ ನಿರ್ವಹಣೆ ಮತ್ತು ಮೊಬೈಲ್ ಇಂಟರ್‌ನೆಟ್ ಬಳಕೆಯ ನಿರ್ವಹಣೆ ಕುರಿತ ತಮ್ಮ ಸಂಶೋಧನೆ ಮಂಡಿಸಲಿದ್ದಾರೆ.
‘20 ವರ್ಷದ ಒಳಗಿನ ಸಂಶೋಧಕರನ್ನು ಉತ್ತೇಜಿಸುವ ಸಲುವಾಗಿಯೇ ನಡೆಯುವ ಈ ಸಮಾವೇಶದಲ್ಲಿ ನಮ್ಮ ಕಾಲೇಜಿನ ಶರಣಬಸವ ಸೇರಿದಂತೆ ದೇಶದ ಐವರು ಯುವಕರು ಪಾಲ್ಗೊಳ್ಳುತ್ತಿದ್ದಾರೆ’ ಎಂದು ಕಾಲೇಜಿನ ಉಪಾಧ್ಯಕ್ಷ ವೈ.ಜೆ. ಪೃಥ್ವಿರಾಜ್ ಭೂಪಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕೊಂಚಿಗೇರಿ ಗ್ರಾಮದ ರೈತ ಕುಟಂಬದ ಶರಣಬಸವ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಈಗಾಗಲೇ ವೂಗಲ್ ಸಾಫ್ಟ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅವರು ನ್ಯೂಯಾರ್ಕ್‌ಗೆ ತೆರಳಲು ಅಗತ್ಯವಿರುವ ಎಲ್ಲ ನೆರವನ್ನೂ ನೀಡಲಾಗಿದೆ. ಸಮಾವೇಶದಲ್ಲಿ ಅವರು ದಕ್ಷಿಣ ಭಾರತದಿಂದ ಪಾಲ್ಗೊಳ್ಳುತ್ತಿರುವ ಏಕೈಕ ಪ್ರತಿನಿಧಿಯಾಗಿರುವುದು ಬಳ್ಳಾರಿಯ ಹೆಮ್ಮೆಯೂ ಆಗಿದೆ’ ಎಂದರು.
‘ನಮ್ಮ ಸಂಸ್ಥೆಯಲ್ಲಿ ವೆಬ್ ಡಿಸೈನಿಂಗ್, ಮೊಬೈಲ್ ಅಪ್ಲಿಕೇಶನ್ಸ್ ಸೇರಿದಂತೆ ಪ್ರಮುಖ ಸೇವೆಗಳನ್ನು ನೀಡಲಾಗುತ್ತಿದೆ. ನವದೆಹಲಿ, ಕೊಯಮತ್ತೂರಿನಲ್ಲೂ ಶಾಖೆಗಳಿವೆ. ನಮ್ಮ ಸಂಶೋಧನೆಗೆ ವಿಶ್ವಸಂಸ್ಥೆ ಅನುದಾನ ನೀಡಿದರೆ, ಮೊದಲು ಅದನ್ನು ಭಾರತದಲ್ಲೇ ಅನುಷ್ಠಾನಗೊಳಿಸಲು ಮನವಿ ಮಾಡುವೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.