ADVERTISEMENT

ಪಕ್ಷದಲ್ಲಿ ನುಸುಳಿದ ಜಾತಿ ಹಾವಳಿ: ಈಶ್ವರಪ್ಪ ಬೇಸರ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ಬೆಂಗಳೂರು: `ಜಾತಿ ಮತ್ತು ಹಣದ ರಾಜಕಾರಣದಿಂದ ಬಿಜೆಪಿ ಬೆಳೆಯಲಿಲ್ಲ. ಆದರೆ, ಈಗ ತಮ್ಮ ಪಕ್ಷದಲ್ಲೂ ಜಾತಿ ರಾಜಕಾರಣ ನುಸುಳಿದೆ~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.

ಪಕ್ಷದ ಪ್ರಧಾನ ಕಚೇರಿ `ಜಗನ್ನಾಥ ಭವನ~ದಲ್ಲಿ ಶುಕ್ರವಾರ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, `ಇತ್ತೀಚಿನ ಬೆಳವಣಿಗೆಗಳಿಂದ ಪಕ್ಷದ ತತ್ವ, ಸಿದ್ಧಾಂತ ಮತ್ತು ವಿಚಾರಗಳಿಗೆ ತುಸು ಕುಂದು ಉಂಟಾಗಿದೆ. ಈ ಗೊಂದಲದಿಂದ ಪಕ್ಷದ ಕಾರ್ಯಕರ್ತರು ನಿರಾಶರಾಗಬೇಕಿಲ್ಲ. ಪಕ್ಷ ತನ್ನ ತತ್ವ ಮತ್ತು ಸಿದ್ಧಾಂತಗಳ ಆಧಾರದಲ್ಲೇ ಮುನ್ನಡೆಯುತ್ತದೆ~ ಎಂದರು.

`ಯಾವುದೇ ಸ್ಥಾನಮಾನ ಅಪೇಕ್ಷಿಸದೇ, ಜಾತಿ ರಾಜಕಾರಣ ಮಾಡದೇ ಸಾವಿರಾರು ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಅಂತಹವರಿಗೆ ಈವರೆಗೂ ಯಾವುದೇ ಸ್ಥಾನಮಾನ ದೊರೆತಿಲ್ಲ. ಆದರೆ, ಸ್ಥಾನಮಾನ ಕೇಳುವವರಿಂದಾಗಿ ಗೊಂದಲ ಉಂಟಾಗುತ್ತಿದೆ~ ಎಂದರು.

ಜನಸಂಘವು ದೇಶಕ್ಕಾಗಿ ಬಿಜೆಪಿಯನ್ನು ಕಟ್ಟಿ, ಬೆಳೆಸಿತು. ನೂರಾರು ಜನರ ತ್ಯಾಗ, ಬಲಿದಾನಗಳಿಂದ ಪಕ್ಷ ದೊಡ್ಡಮಟ್ಟಕ್ಕೆ ಬೆಳೆದಿದೆ. ಶ್ಯಾಂ ಪ್ರಸಾದ್ ಮುಖರ್ಜಿ, ದೀನ್‌ದಯಾಳ್ ಉಪಾಧ್ಯಾಯರಂಥ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಪಕ್ಷ ಮುನ್ನಡೆಯಬೇಕಿದೆ ಎಂದರು.

150 ಸ್ಥಾನ ಖಚಿತ: ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೊಂದಿಗೆ ಸಂವಾದ ನಡೆಸಿದ ಈಶ್ವರಪ್ಪ, `ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆದ್ದು, ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲಿದೆ. ಮುಂದಿನ ಚುನಾವಣೆಗೆ ಪಕ್ಷ ಸರ್ವಸನ್ನದ್ಧವಾಗಿದೆ~ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಉಪ ಸಭಾಪತಿ ವಿಮಲಾ ಗೌಡ, `ಹಿಂದೆ ಬಿಜೆಪಿ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಇರುತ್ತಿರಲಿಲ್ಲ. ಠೇವಣಿ ದೊರೆತ ಸಂತಸಕ್ಕೆ ಸಿಹಿ ಹಂಚಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರ ಹಿಡಿದಿದ್ದೇವೆ ಎಂದರು.

ಶಾಸಕರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿ.ಎನ್.ವಿಜಯಕುಮಾರ್, ಬೆಂಗಳೂರು ಮಹಾನಗರ ಬಿಜೆಪಿ ಘಟಕದ ಅಧ್ಯಕ್ಷ ಸುಬ್ಬನರಸಿಂಹ, ಮಾಜಿ ಶಾಸಕ ನಿರ್ಮಲ್‌ಕುಮಾರ್ ಸುರಾನಾ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.