ADVERTISEMENT

ಪಡಿತರ ಸಾಗಣೆ ವ್ಯವಸ್ಥೆ ಬದಲು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 16:40 IST
Last Updated 14 ಮಾರ್ಚ್ 2011, 16:40 IST

ಬೆಂಗಳೂರು: ನ್ಯಾಯಬೆಲೆ ಅಂಗಡಿಗಳಿಗೆ ಗುತ್ತಿಗೆದಾರರ ಮೂಲಕ ಆಹಾರ ಪದಾರ್ಥಗಳನ್ನು ತಲುಪಿಸುತ್ತಿದ್ದ ವ್ಯವಸ್ಥೆಯನ್ನು ಏಪ್ರಿಲ್‌ನಿಂದ ರದ್ದುಪಡಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶೋಭಾ ಕರಂದ್ಲಾಜೆ ವಿಧಾನ ಪರಿಷತ್ತಿಗೆ ಸೋಮವಾರ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದರು. ‘ಪಡಿತರ ಸಾಗಣೆಯ ಅಕ್ರಮದಲ್ಲಿ ಗುತ್ತಿಗೆದಾರರು  ಭಾಗಿಯಾಗಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ’ ಎಂದರು.

‘ನ್ಯಾಯಬೆಲೆ ಅಂಗಡಿಗಳನ್ನು ನಡೆಸುವವರೇ ಇನ್ನು ಮುಂದೆ ತಾಲ್ಲೂಕು ಕೇಂದ್ರಗಳಲ್ಲಿರುವ ಇಲಾಖೆಯ ಗೋದಾಮುಗಳಿಂದ ನೇರವಾಗಿ ಆಹಾರಧಾನ್ಯಗಳನ್ನು ಪಡೆಯುವಂತಹ ವ್ಯವಸ್ಥೆ ಮಾಡಲಾಗಿದೆ. ಗೋದಾಮುಗಳಿಂದ ಅಂಗಡಿಯವರಿಗೆ ಧಾನ್ಯಗಳನ್ನು ಒಯ್ಯಲು ತಗಲುವ ಸಾರಿಗೆ ವೆಚ್ಚವನ್ನು ಸರ್ಕಾರವೇ ನೀಡಲಿದೆ’ ಎಂದು ಹೇಳಿದರು. ‘ಆಹಾರ ಧಾನ್ಯಗಳ ದುರುಪಯೋಗದಲ್ಲಿ ಭಾಗಿಯಾಗಿರುವ ಸಾಗಣೆ ಗುತ್ತಿಗೆದಾರರ ಗುತ್ತಿಗೆಯನ್ನು ರದ್ದುಪಡಿಸಲಾಗುತ್ತಿದೆ.

ಇದಲ್ಲದೇ, ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಸಹ ಹೂಡಲಾಗುತ್ತಿದೆ’ ಎಂದು ಅವರು ನುಡಿದರು.‘ಗೋದಾಮುಗಳಿಗೆ ಆಹಾರ ಧಾನ್ಯಗಳನ್ನು ಸಾಗಿಸುವ ಲಾರಿಗಳಿಗೆ ಪ್ರತ್ಯೇಕವಾದ ಬಣ್ಣವನ್ನು ಬಳಿಯಲಾಗುತ್ತದೆ. ಇದಲ್ಲದೇ, ಆ ಲಾರಿಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಪಡಿತರ ಆಹಾರ ಧಾನ್ಯ ಸಾಗಿಸುವ ಬಗ್ಗೆ ಬರೆಸಲಾಗುತ್ತದೆ.

‘ಲಾರಿಗಳಲ್ಲಿ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ವ್ಯವಸ್ಥೆಯನ್ನು ಅಳವಡಿಸುವುದರಿಂದ ಅದು ಚಲಿಸುವ ಮಾರ್ಗದ ಪಥ ತಿಳಿಯುತ್ತದೆಯೇ ಹೊರತು, ಮಾರ್ಗ ಮಧ್ಯೆದಲ್ಲಿ ನಿಲ್ಲಿಸಿ ಆಹಾರ ಧಾನ್ಯಗಳನ್ನು ಕಳುವು ಮಾಡುವುದು ಪತ್ತೆಯಾಗುವುದಿಲ್ಲ’ ಎಂದು ಅವರು ನುಡಿದರು.

 ರಾತ್ರಿ ನಿರಂತರ ವಿದ್ಯುತ್ ಭರವಸೆ
ಬೆಂಗಳೂರು: ‘ಶಾಲಾ ಕಾಲೇಜುಗಳ ಪರೀಕ್ಷೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಸಂಜೆ 6ಗಂಟೆಯಿಂದ ಬೆಳಿಗ್ಗೆ 6ಗಂಟೆಯವರೆಗೆ ನಿರಂತರ ವಿದ್ಯುತ್ ಪೂರೈಸಲಾಗುವುದು’ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.