ಬೆಂಗಳೂರು: ಸೇವೆ ಮುಂದುವರಿಕೆ, ವೇತನವನ್ನು ತಿಂಗಳಿಗೆ ₹25 ಸಾವಿರಕ್ಕೆ ಹೆಚ್ಚಿಸಬೇಕು ಎಂಬುದೂ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪದವಿ ಪರೀಕ್ಷೆ ಮತ್ತು ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಎಚ್ಚರಿಸಿದ್ದಾರೆ.
‘ಉನ್ನತ ಶಿಕ್ಷಣ ಸಚಿವರನ್ನು ಹಲವು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳೇ ನಮ್ಮನ್ನು ಕರೆದು ಚರ್ಚಿಸಬೇಕು’ ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರ ಮೂರ್ತಿ, ಸಂಘದ ರಾಜ್ಯಾಧ್ಯಕ್ಷ ಎನ್. ಶ್ರೀನಿವಾಸಾಚಾರ್ ಹೇಳಿದರು.
ಇದೇ ಬೇಡಿಕೆ ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಮತ್ತು ಡಿವೈಎಫ್‌ಐಆಶ್ರಯದಲ್ಲಿ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪನ್ಯಾಸಕರು ಧರಣಿ ನಡೆಸುತ್ತಿದ್ದಾರೆ.
ಪ್ರಮುಖ ಬೇಡಿಕೆಗಳು ಏನೇನು?
2016–17ನೇ ಸಾಲಿಗೆ ಆನ್‌ಲೈನ್ ಮೂಲಕ ಹೊಸದಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳದೆ ಈಗ ಸೇವೆ ಸಲ್ಲಿಸುತ್ತಿರುವವರನ್ನೇ ಮುಂದುವರಿಸಬೇಕು.
ಸೇವೆಯಲ್ಲಿ ವಿಲೀನಗೊಳ್ಳುವವರೆಗೆ ಮಾಸಿಕ ₹25 ಸಾವಿರದಂತೆ 12 ತಿಂಗಳು ವೇತನ ನೀಡಬೇಕು.
ಕಳೆದ ಜನವರಿ 12 ರಿಂದ ಫೆಬ್ರುವರಿ 16ರ ವರೆಗೆ ಹೋರಾಟ ನಡೆಸಿದ ಅವಧಿಯಲ್ಲಿ ಕಡಿತಗೊಳಿಸಿರುವ ವೇತನವನ್ನು ಕೂಡಲೇ ಬಿಡುಗಡೆಗೊಳಿಸಬೇಕು.
ಅತಿಥಿ ಉಪನ್ಯಾಸಕಿಯರಿಗೆ ವೇತನ ಸಹಿತ ಕನಿಷ್ಠ 3 ತಿಂಗಳು ಹೆರಿಗೆ ರಜೆ ನೀಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.