ADVERTISEMENT

ಪರಿಶಿಷ್ಟರ ವಿರುದ್ಧ ದೌರ್ಜನ್ಯ ಪ್ರಕರಣ: ಪರಿಹಾರ ಧನ ಹೆಚ್ಚಳ

ಭೀಮಸೇನ ಚಳಗೇರಿ
Published 12 ಜೂನ್ 2012, 19:30 IST
Last Updated 12 ಜೂನ್ 2012, 19:30 IST

ಕೊಪ್ಪಳ:  ಅವಮಾನ, ಅವಾಚ್ಯ ಪದಗಳಿಂದ ನಿಂದನೆ, ದುರುದ್ದೇಶಪೂರಿತ ಕಾನೂನು ಕ್ರಮ ಸೇರಿದಂತೆ ವಿವಿಧ ಪ್ರಕಾರದ ದೌರ್ಜನ್ಯಕ್ಕೆ ಒಳಗಾಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ನೀಡಲಾಗುತ್ತಿರುವ ಪರಿಹಾರ ಧನವನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇದುವರೆಗೆ ನೀಡಲಾಗುತ್ತಿದ್ದ ಪರಿಹಾರ ಧನವನ್ನು ದೌರ್ಜನ್ಯದ ಸ್ವರೂಪದ ಆಧಾರದ ಮೇಲೆ ಎರಡರಿಂದ ಮೂರು ಪಟ್ಟು ಹೆಚ್ಚಿಸಲಾಗಿದೆ. ದೌರ್ಜನ್ಯ ಹಿನ್ನೆಲೆಯಲ್ಲಿ ಪರಿಶಿಷ್ಟರಿಗೆ ನೀಡಲಾಗುವ ಈ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇ 50ರಷ್ಟು ಭರಿಸಲಿವೆ ಎಂದು ಸಮಾಜ ಕಲ್ಯಾಣ ಇಲಾಖೆಯು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಖಾದ್ಯವಲ್ಲದ ಅಥವಾ ಅಸಹ್ಯಕರ ಪದಾರ್ಥಗಳನ್ನು ತಿನ್ನಿಸುವ ಮೂಲಕ ಎಸಗುವ ದೌರ್ಜನ್ಯಕ್ಕೆ ಈ ಮೊದಲು ರೂ 25 ಸಾವಿರ  ಪರಿಹಾರ ನೀಡಲಾಗುತ್ತಿತ್ತು. ಆದರೆ, ಪ್ರಸಕ್ತ ತಿಂಗಳಿನಿಂದ ಜಾರಿಗೆ ಬಂದಿರುವ ವ್ಯವಸ್ಥೆಯಂತೆ ಈ ಮೊತ್ತವನ್ನು ರೂ 60 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಈ ಪರಿಹಾರ ಮೊತ್ತದ ಪೈಕಿ ಶೇ 25ರಷ್ಟು ಹಣವನ್ನು ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ ತಕ್ಷಣ ನೀಡಬೇಕು.  ಆರೋಪಿಗಳಿಗೆ ನ್ಯಾಯಲಯವು ಶಿಕ್ಷೆ ಪ್ರಕಟಿಸಿದ ನಂತರ ಉಳಿದ ಮೊತ್ತವನ್ನು ಪಾವತಿಸಬೇಕು ಎಂಬ ನಿಬಂಧನೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಅಪಮಾನ, ಗಾಯಗೊಳಿಸುವುದು, ಕಿರುಕುಳ ನೀಡುವುದು, ಪರಿಶಿಷ್ಟರಿಗೆ ಸೇರಿದ ಜಮೀನಿನಲ್ಲಿ ಬೇಸಾಯ ಮಾಡುವುದು, ಒತ್ತಾಯದಿಂದ ಭಿಕ್ಷೆ ಬೇಡಲು ಹಚ್ಚುವುದು, ಜೀತಕ್ಕೆ ಇಟ್ಟುಕೊಳ್ಳುವಂತಹ ಪ್ರಕರಣಗಳಲ್ಲಿ ಸಹ ರೂ 60 ಸಾವಿರ  ಪರಿಹಾರಧನ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಇಂತಹ ಎಲ್ಲ ಪ್ರಕರಣಗಳಲ್ಲಿ ರೂ 25 ಸಾವಿರ  ಪರಿಹಾರ ನೀಡಲಾಗುತ್ತಿತ್ತು.

ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಾಗ ಈ ಮೊದಲು ರೂ 50 ಸಾವಿರ  ಪರಿಹಾರಧನ ನೀಡಲಾಗುತ್ತಿತ್ತು. ಈಗ ಈ ಪರಿಹಾರ ಮೊತ್ತವನ್ನು ರೂ 1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದಂತಹ ಪ್ರಕರಣಗಳಲ್ಲೂ ಇಷ್ಟೇ ಮೊತ್ತ ಪರಿಹಾರಧನ ನೀಡಲು ಇಲಾಖೆ ಆದೇಶ ಹೊರಡಿಸಿದೆ.

ಪರಿಶಿಷ್ಟರು ಕುಡಿಯಲು ಬಳಸುವ ನೀರನ್ನು ಮಲಿನಗೊಳಿಸುವುದು, ಸಾಮಾನ್ಯವಾಗಿ ಓಡಾಡಲು ಬಳಸುವ ದಾರಿಯಲ್ಲಿ ಪರಿಶಿಷ್ಟರು ಓಡಾಡಲು ಅವಕಾಶ ನೀಡದೇ ಇರುವಂತಹ ಕೃತ್ಯಗಳು ನಡೆದಾಗ ರೂ 2.50 ಲಕ್ಷವರೆಗೆ ಅಥವಾ ಮೊದಲಿನ ವ್ಯವಸ್ಥೆಯನ್ನು ಪುನರ್‌ಸ್ಥಾಪನೆ ಮಾಡುವ ಸಂಪೂರ್ಣ ವೆಚ್ಚವನ್ನು ಜಿಲ್ಲಾಡಳಿತ ಭರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪರಿಶಿಷ್ಟರ ವಿರುದ್ಧ ಸುಳ್ಳು ಸಾಕ್ಷಿ ಹೇಳಿದ ಪ್ರಕರಣಗಳಲ್ಲಿ ಪರಿಶಿಷ್ಟರಿಗೆ ಆಗಿರುವ ಹಾನಿಗೆ ಸಂಬಂಧಿಸಿದಂತೆ ಪೂರ್ಣ ಪರಿಹಾರಧನ ಇಲ್ಲವೇ ರೂ 2.5 ಲಕ್ಷ  ನೀಡುವುದು. ಕುಟುಂಬವೊಂದರ ದುಡಿಯಲಾರದ ಸದಸ್ಯನು ಅಂಗವಿಕಲನಾದರೆ ಅಥವಾ ಕೊಲೆಯಾದರೆ ರೂ 2.5 ಲಕ್ಷ  ಪರಿಹಾರ ಧನ ನೀಡಬೇಕು. ಒಂದು ವೇಳೆ ದುಡಿಯುತ್ತಿದ್ದ ಸದಸ್ಯ ಅಂಗವಿಕಲನಾದರೆ ಅಥವಾ ಕೊಲೆಗೀಡಾದ ಸಂದರ್ಭದಲ್ಲಿ ರೂ 5 ಲಕ್ಷ ಪರಿಹಾರ ನೀಡಲು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.