ADVERTISEMENT

ಪರಿಷತ್‌ ಪತ್ರದಲ್ಲಿ ‘ಸಿರಿಗನ್ನಡಂ ಬಾಳೆಗೆ’

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2014, 19:57 IST
Last Updated 6 ನವೆಂಬರ್ 2014, 19:57 IST
ಪರಿಷತ್‌ ಪತ್ರದಲ್ಲಿ ‘ಸಿರಿಗನ್ನಡಂ ಬಾಳೆಗೆ’
ಪರಿಷತ್‌ ಪತ್ರದಲ್ಲಿ ‘ಸಿರಿಗನ್ನಡಂ ಬಾಳೆಗೆ’   

ಬೇಲೂರು: ಸಿರಿಗನ್ನಡಂಗಳಿಗೆ (ಸಿರಿಗನ್ನಡಂ ಗೆಲ್ಗೆ) ಸಿರಿಗನ್ನಡಂ ಬಾಳೆಗೆ (ಸಿರಿಗನ್ನಡಂ ಬಾಳ್ಗೆ) ಪರಿಷತು (ಪರಿಷತ್ತು) ನಡೆಯಲ್ಲಿದೆ (ನಡೆಯಲಿದೆ) ಉದ್ಗಘಟನೆ (ಉದ್ಘಾಟನೆ) ಸಮರೂಪ (ಸಮಾ­ರೋಪ) ಸಂಸ್ಕೃತಿಕ (ಸಾಂಸ್ಕೃತಿಕ) ಜರುಗಲ್ಲಿದೆ (ಜರು­ಗಲಿದೆ) ತವುಗಳು (ತಾವುಗಳು) ಕಾರ್ಯಕ್ರರ್ಮ­ವನ್ನು (ಕಾರ್ಯಕ್ರಮ­ವನ್ನು) ಯಶ್ಸವಿಗೊಳಿಸಲು (ಯಶಸ್ವಿಗೊಳಿಸಲು)... ಆವರಣದಲ್ಲಿರುವುದು ಸರಿಯಾದ ಪದ)

-ಇದೇನು ಇಷ್ಟೊಂದು ತಪ್ಪುಗಳು! ಇದನ್ನು ಯಾರು ಬರೆದಿರಬಹುದು? ಏಕೆ ಬರೆದಿರಬಹುದು ಎಂದು ಯೋಚಿಸುತ್ತಿರುವಿರಾ? ಇದೊಂದು ಅಂಚೆ ಪತ್ರ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಸದಸ್ಯರಿಗೆ ನೀಡಿ­ರುವ ಆಹ್ವಾನ. ಇದನ್ನು ಬರೆದಿರುವುದು ಹೆಮ್ಮೆಯ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು. ಅಚ್ಚರಿಯಾದರೂ ಇದು ಸತ್ಯ.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ನ. 16 ಮತ್ತು 17ರಂದು ಹಲ್ಮಿಡಿ ಮತ್ತು ಬೇಲೂರು ಪಟ್ಟಣದಲ್ಲಿ ‘ಹಲ್ಮಿಡಿ ಉತ್ಸವ’ ನಡೆಸುತ್ತಿದೆ. ಇದಕ್ಕೆ ತಾಲ್ಲೂಕಿನ ಸದಸ್ಯರನ್ನು ಆಹ್ವಾನಿಸುವ ಸಲುವಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸದಸ್ಯರಿಗೆ ಅಂಚೆ ಕಾರ್ಡ್‌ ಬರೆದಿದೆ. ಈ ಪತ್ರದಲ್ಲಿ ತಪ್ಪುಗಳ ಸರ­ಮಾಲೆಯೇ ಇದೆ. ಇದಕ್ಕೆ ಕಸಾಪ ತಾಲ್ಲೂಕು ಘಟಕ ಗೌರವ ಕಾರ್ಯದರ್ಶಿ ಮಹೇಶ್‌ ಸಹಿ ಮಾಡಿದ್ದಾರೆ.

ಸಾಹಿತ್ಯ ಪರಿಷತ್ತು ಬರೆದ ಪತ್ರ­ದಲ್ಲಿಯೇ ಇಷ್ಟೊಂದು ತಪ್ಪುಗಳು ಇರುವು­ದನ್ನು ನೋಡಿದರೆ ಕನ್ನಡದ ಸ್ಥಿತಿಯನ್ನು ನೆನೆದು ಕಣ್ಣೀರಿಡು­ವಂತಾಗಿದೆ. ಕನ್ನಡದ ತವರು ನೆಲದಲ್ಲಿ ಕನ್ನಡಮ್ಮನ ಈ ಗತಿ ನೆನೆದು ಅಯ್ಯೋ ಎನ್ನುವಂತಾಗಿದೆ. ಯಾವುದೋ ಸಂಘ–ಸಂಸ್ಥೆ ಈ ರೀತಿ ತಪ್ಪುಗಳನ್ನು ಬರೆದಿದ್ದರೆ, ಕ್ಷಮಿಸಬಹು­ದಿತ್ತೇನೋ. ಆದರೆ, ಕನ್ನಡಿಗರ ಮಾತೃಸಂಸ್ಥೆಯಾದ ಸಾಹಿತ್ಯ ಪರಿಷತ್ತು ಈ ರೀತಿ ತಪ್ಪುಗಳನ್ನು ಬರೆದರೆ ಕ್ಷಮಿಸಲು ಸಾಧ್ಯವೇ? ಸಾಹಿತ್ಯ ಪರಿಷತ್ತೇ ಕನ್ನಡಕ್ಕೆ ಈ ಸ್ಥಿತಿ ತಂದಿರುವುದು ಕನ್ನಡಿಗರ ದೌರ್ಭಾಗ್ಯವೇ ಸರಿ ಎಂದು ಮರುಗುತ್ತಾರೆ ಹೆಸರು ಹೇಳಲು ಇಚ್ಛಿಸದ ತಾಲ್ಲೂಕಿನ ಕಸಾಪ ಸದಸ್ಯರೊಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT