ADVERTISEMENT

ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ದಾವಣಗೆರೆ: ಬೆಂಗಳೂರು ವಿಶ್ವವಿದ್ಯಾಲಯದಿಂದ ಪರೀಕ್ಷಾ ಕೇಂದ್ರಕ್ಕೆ ಅಗತ್ಯ ಮಾಹಿತಿ ತಲುಪಲಿಲ್ಲ ಎಂಬ ಗೊಂದಲದಿಂದಾಗಿ ದೂರಶಿಕ್ಷಣದ ಮೂಲಕ ಸ್ನಾತಕೋತ್ತರ ಪರೀಕ್ಷೆ ತೆಗೆದುಕೊಂಡಿದ್ದ ನೂರಾರು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾದ ಘಟನೆ ನಗರದಲ್ಲಿ ಶನಿವಾರ ನಡೆದಿದೆ.

ಇಲ್ಲಿನ ಸಿದ್ದಗಂಗಾ ವಿದ್ಯಾಸಂಸ್ಥೆಯನ್ನು ಪರೀಕ್ಷಾ ಕೇಂದ್ರ ಎಂದು ಗುರುತಿಸಿ ಮಧ್ಯಾಹ್ನ 2ಕ್ಕೆ ಪರೀಕ್ಷೆ ನಡೆಯಲಿದೆ ಎಂಬುದಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನೀಡಲಾಗಿತ್ತು. ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳ ಸಂಖ್ಯೆ, ವಿಷಯ, ಪ್ರವೇಶ ಪತ್ರದ ಪ್ರತಿ, ವೇಳಾಪಟ್ಟಿ ಮತ್ತಿತರ ಯಾವುದೇ ಮಾಹಿತಿಯೂ ಪರೀಕ್ಷಾ ಕೇಂದ್ರಕ್ಕೆ ಮಧ್ಯಾಹ್ನ 12 ಗಂಟೆಯಾದರೂ ಲಭ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಪರೀಕ್ಷೆಗೆ ಸಿದ್ಧತೆ ಕೈಗೊಂಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ನೂರಾರು ವಿದ್ಯಾರ್ಥಿಗಳು ವಿ.ವಿ. ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಎಂಎ, ಎಂಕಾಂ ಹಾಗೂ ಎಂಎಸ್ಸಿ ಪದವಿಯ ದ್ವಿತೀಯ ವರ್ಷದ ಪರೀಕ್ಷೆ ನಡೆಯಬೇಕಿತ್ತು. ಇಲ್ಲಿನ ದಿಕ್ಸೂಚಿ ಸ್ಟಡಿ ಸೆಂಟರ್ ಮೂಲಕ ಪರೀಕ್ಷೆ ತೆಗೆದುಕೊಂಡಿದ್ದ ರಾಜ್ಯದ ವಿವಿಧ ಜಿಲ್ಲೆಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಆಗಮಿಸಿದ್ದರು. ಹಿಂದಿನ ವರ್ಷಗಳಲ್ಲಿ ದಿಕ್ಸೂಚಿಯೇ ಪರೀಕ್ಷೆ ಆಯೋಜಿಸುತ್ತಿತ್ತು.

ಈ ವರ್ಷ ಬೆಂಗಳೂರು ವಿವಿಯವರೇ ಪರೀಕ್ಷೆ ನಡೆಸುವುದಾಗಿ ಹೇಳಿ ಪ್ರವೇಶಪತ್ರ ಕಳುಹಿಸಿಕೊಟ್ಟಿದ್ದರು. ಆದರೆ, ಇಲ್ಲಿ ಯಾವುದೇ ಮಾಹಿತಿ ಇಲ್ಲದೇ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.
`ಕಳೆದ ತಿಂಗಳು ಪರೀಕ್ಷೆ ನಡೆಸುವುದಾಗಿ ವಿವಿಯ ನಿರ್ದೇಶಕರು ಫೋನ್ ಮೂಲಕ ತಿಳಿಸಿದ್ದರು.

ಬಳಿಕ ಯಾವುದೇ ಮಾಹಿತಿ ನೀಡಿರಲಿಲ್ಲ. ಶನಿವಾರ ಮಧ್ಯಾಹ್ನ 12ರ ವೇಳೆಗೆ ಪರೀಕ್ಷಾ ವೀಕ್ಷಕರಾಗಿ ರಮೇಶ ಎಂಬುವವರು ಆಗಮಿಸಿದ್ದರು. ಎರಡು ಗಂಟೆಯಲ್ಲಿ ಹೇಗೆ ತಯಾರಿ ಮಾಡಿಕೊಳ್ಳುವುದು. ಹಾಗಾಗಿ ಪರೀಕ್ಷೆ ಮುಂದೂಡಲಾಗಿದೆ ಎಂದು ನಿರ್ದೇಶಕರು ಫ್ಯಾಕ್ಸ್ ಕಳುಹಿಸಿದ್ದಾರೆ. ಇಲ್ಲಿ ಭಾನುವಾರದಿಂದ ನಡೆಯಬೇಕಿರುವ ಯಾವ ವಿಷಯಗಳ ಪರೀಕ್ಷೆಗಳೂ ನಡೆಯುವುದಿಲ್ಲ~ ಎಂದು ಶಾಲೆ ಮುಖ್ಯ ಶಿಕ್ಷಕಿ ಜಸ್ಟಿನ್ ಡಿಸೋಜಾ ಸ್ಪಷ್ಟಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.