ADVERTISEMENT

ಪರ್ಯಾಯವಾದ ಜಗತ್ತನ್ನು ಕಟ್ಟಿದ ತತ್ವಪದ

ತತ್ವಪದ ಸಂಗಮದಲ್ಲಿ ಆರ್‌.ಕೆ. ಹುಡಗಿ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಜನವರಿ 2016, 19:47 IST
Last Updated 17 ಜನವರಿ 2016, 19:47 IST
ಕಲಬುರ್ಗಿಯ ಡಾ.ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಭಾನುವಾರ ಆರಂಭವಾದ ಎರಡು ದಿನಗಳ ತತ್ವಪದ ಸಂಗಮ ಕಾರ್ಯಕ್ರಮವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಮೈಕಲ್‌ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು
ಕಲಬುರ್ಗಿಯ ಡಾ.ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಭಾನುವಾರ ಆರಂಭವಾದ ಎರಡು ದಿನಗಳ ತತ್ವಪದ ಸಂಗಮ ಕಾರ್ಯಕ್ರಮವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಮೈಕಲ್‌ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು   

ಕಲಬುರ್ಗಿ: ಎಂಥಾ ಕಳ್ಳನವ್ವ, ಈ ಊರಾಗೌಡ ಎಂಥಾ ಸುಳ್ಳನವ್ವ....

ತತ್ವಪದಕಾರರಿಂದ ಸಂಗೀತದ ತಾಳಕ್ಕೆ ತಕ್ಕಂತೆ ಈ ಗಾಯನ ಕೇಳಿಬರುತ್ತಿದ್ದಂತೆ ಪ್ರೇಕ್ಷಕರಿಂದ ಚಪ್ಪಾಳೆಗಳ ಸುರಿಮಳೆ..
ಅಂಧ ತತ್ವಪದಕಾರರ ಹಾರ್ಮೋನಿಯಂ ನಾದಕ್ಕೆ ಕೇಳಿಬಂದ ಬೆಂಗಾಲಿ ಸಂತೆ ಬಾಳಾ ಗಡಿಬಡಿ.. ಬೆಂಗಾಲಿ ಸಂತಿ ಬಾಳಾ ಗಡಿಬಿಡಿ.. ಹಾಡಿನ ಮೋಡಿಗೆ ತಲೆದೂಗಿದ ಇಡೀ ಸಭಾಂಗಣ..

ಇವು ಭಾನುವಾರ ನಗರದ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಷ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು, ಗುಲಬರ್ಗಾ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಡೆದ ಎರಡು ದಿನಗಳ ತತ್ವಪದ ಸಂಗಮ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕಂಡು ಬಂದ ದೃಶ್ಯಗಳು.

ವಿವಿಧ ಜಿಲ್ಲೆಗಳಿಂದ ಬಂದಿದ್ದ ತತ್ವಪದಕಾರರ ತಂಡದ ಗಾಯನಕ್ಕೆ ಕಲಬುರ್ಗಿ ಜನತೆ ಮನಸೋತರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಮೈಕಲ್‌, ತತ್ವಪದಗಳಲ್ಲಿ ಒಳಸಾರವನ್ನು ಅರಿತರೆ ಶಾಂತಿ, ನೆಮ್ಮದಿ ಕಾಣಲು ಸಾಧ್ಯ, ತತ್ವಪದಗಳಲ್ಲಿ ಅಧ್ಯಾತ್ಮದ ಜತೆಗೆ ಸಾಮಾಜಿಕ ಜವಾಬ್ದಾರಿಗಳ ಸಂದೇಶಗಳನ್ನು ಕಾಣಬಹುದು ಎಂದರು.

ಕಲಬುರ್ಗಿ ರಂಗಾಯಣ ನಿರ್ದೇಶಕ ಆರ್‌.ಕೆ. ಹುಡಗಿ ಮಾತನಾಡಿ, ವಿಚಾರಗಳೇ ಸಮಾಜವನ್ನು ಆಳುತ್ತವೆ ಎಂಬುದು ಮಾತು. ಸಮಾಜವನ್ನು ವಿಚಾರಗಳೇ ಆಳುತ್ತವೆ ಎಂಬುದು ಮೇಲ್ನೋಟಕ್ಕೆ ಕಂಡುಬಂದರೂ, ಆಳುವ ವರ್ಗದ ವಿಚಾರಗಳ ಪರಿಧಿಯೊಳಗೆ ನಾವಿದ್ದೇವೆ. ಆಳುವ ವರ್ಗದ ವಿಚಾರಗಳೇ ನಮ್ಮನ್ನು ಆಳುತ್ತಿವೆ ಎಂಬುದು ಸತ್ಯ. ಇಂತಹ ವ್ಯವಸ್ಥೆಯೊಳಗೆ ಪರ್ಯಾಯವಾದ ಜಗತ್ತನ್ನು ಕಟ್ಟಿದ ಕೀರ್ತಿ ತತ್ವಪದಗಳಿಗೆ ಸಲ್ಲುತ್ತವೆ ಎಂಬುದನ್ನು ಕಾಣಬಹುದು ಎಂದರು.

ಡಾ. ಮೀನಾಕ್ಷಿ ಬಾಳಿ ಮಾತನಾಡಿ, ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ತತ್ವಪದದ ಬಹುದೊಡ್ಡ ಸಂಸ್ಕೃತಿಯೇ ಇದೆ. ಯಕ್ಷಗಾನವನ್ನೂ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಂತೆ ಈ ಭಾಗದ ಕಲೆಗಳನ್ನು ಪ್ರಚುರಪಡಿಸುವ ಕೆಲಸಗಳು ಇಂದಿಗೂ ಆಗಿಲ್ಲ. ತತ್ವಪದಗಳು, ಹಗಲು ವೇಷ ಸೇರಿದಂತೆ ಜನಪದ ಕಲೆಗಳನ್ನು ಅಂತರರಾಷ್ಷ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಕೆಲಸಗಳಾಗಬೇಕು. ಈ ಭಾಗದ ಪ್ರಜ್ಞಾವಂತರು ಜನಪದ ಕಲೆಗಳ ಬಗ್ಗೆ ಅಸಡ್ಡೆ ತೋರದೆ ಅವುಗಳನ್ನು ಬೆಳೆಸಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಯುವಕರಿಗೆ ನಮ್ಮ ಭಾಗದ ಪರಂಪರೆ, ಸಂಸ್ಕೃತಿ ಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ತತ್ವಪದ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಯುವಕರು ಪಾಶ್ಚಿಮಾತ್ಯ ಕಲೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರುವುದನ್ನು ಬಿಟ್ಟು, ನಮ್ಮ ಜನಪದ ಕಲೆಗಳ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ, ಡಾ. ರಹಮತ್‌ ತರಿಕೆರೆ, ಕಾ. ತ ಚಿಕ್ಕಣ್ಣ , ಸಂದೀಪ ಇದ್ದರು. ವಿ.ಎನ್‌. ಮಲ್ಲಿಕಾರ್ಜುನ ಸ್ವಾಮಿ ನಿರೂಪಿಸಿದರು. ಡಾ. ಕೆ. ನೀಲಾ ವಂದಿಸಿದರು.

ಹಾಸನ, ಕಲಬುರ್ಗಿ, ತುಮಕೂರು, ಕೋಲಾರ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳ ತತ್ವಪದಕಾರರು, ವಿದ್ಯಾರ್ಥಿಗಳು, ಸಂಗೀತಾಸಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.