ADVERTISEMENT

ಪರ್ಯಾಯ ಸಮಾವೇಶಕ್ಕೆ ಸಿ.ಎಂ ಬೆಂಬಲಿಗರ ಚಿಂತನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ಬೆಂಗಳೂರು: ಯಡಿಯೂರಪ್ಪ ಬೆಂಬಲಿಗರು ಅವರ ಹುಟ್ಟುಹಬ್ಬದ ನೆಪದಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಸಂಘಟಿಸಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ಬೆಂಬಲಿಗರು ಅವರಿಗೂ ಅಭಿನಂದನೆಯ ರೂಪದಲ್ಲಿ ಬೃಹತ್ ಸಮಾವೇಶ ಏರ್ಪಡಿಸಲು ಮುಂದಾಗಿದ್ದಾರೆ. ಪಕ್ಷದಲ್ಲಿ ಇದು ಇಬ್ಬಣಗಳ ನೇರ ಶಕ್ತಿ ಪ್ರದರ್ಶನಕ್ಕೆ ಕಾರಣ ಆಗುವ ಸಾಧ್ಯತೆ ಇದೆ. ಬಜೆಟ್ ಮಂಡನೆ ನಂತರ ವಿಜಾಪುರ ಅಥವಾ ಬಾಗಲಕೋಟೆಯಲ್ಲಿ ಶಕ್ತಿ ಪ್ರದರ್ಶನ ನಡೆಸಲು ಮುಖ್ಯಮಂತ್ರಿ  ಬೆಂಬಲಿಗರು ನಿರ್ಧರಿಸಿದ್ದಾರೆ.

ಇದಕ್ಕೆ ಪೂರ್ವಭಾವಿಯಾಗಿ ಇದೇ 14ರಂದು ವಿಜಾಪುರದಲ್ಲಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಗೊತ್ತಾಗಿದೆ. ಹಿಂದುಳಿದ ಮತ್ತು ದಲಿತ ವರ್ಗಗಳ ವಿವಿಧ ಸ್ವಾಮೀಜಿಗಳು ಶನಿವಾರ ಮುಖ್ಯಮಂತ್ರಿ ಸದಾನಂದ ಗೌಡರನ್ನು ಭೇಟಿಯಾಗಿ ಬಜೆಟ್‌ನಲ್ಲಿ ಒಂದು ಸಾವಿರ ರೂಪಾಯಿ ಅನುದಾನ ನೀಡುವಂತೆ ಮನವಿ ಮಾಡಿದ್ದು,  ಬೇಡಿಕೆ ಈಡೇರುವ ಸಾಧ್ಯತೆಗಳಿವೆ. ಇದನ್ನೇ ನೆಪ ಮಾಡಿಕೊಂಡು ಬಜೆಟ್ ನಂತರ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲು ಸ್ವಾಮೀಜಿಗಳು,  ಹಿಂದುಳಿದ ವರ್ಗಗಳ ಮುಖಂಡರು ನಿರ್ಧರಿಸಿದ್ದಾರೆ.  ಪ. ಜಾತಿ, ಪಂಗಡ, ಮುಸ್ಲಿಂ, ಹಿಂದುಳಿದ ವರ್ಗ ಸೇರಿದಂತೆ ಎಲ್ಲ ಸಮುದಾಯದವರೂ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.