ADVERTISEMENT

ಪರ– ವಿರೋಧಕ್ಕೆ ಜಾಲತಾಣ ವೇದಿಕೆ

ಬಸವರಾಜ ಹವಾಲ್ದಾರ
Published 20 ಮಾರ್ಚ್ 2018, 19:30 IST
Last Updated 20 ಮಾರ್ಚ್ 2018, 19:30 IST
ಪರ– ವಿರೋಧಕ್ಕೆ ಜಾಲತಾಣ ವೇದಿಕೆ
ಪರ– ವಿರೋಧಕ್ಕೆ ಜಾಲತಾಣ ವೇದಿಕೆ   

ಹುಬ್ಬಳ್ಳಿ: ‘ಲಿಂಗಾಯತ ಹಾಗೂ ವೀರಶೈವ ಲಿಂಗಾಯತರಿಗೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸಂಪುಟ ನಿರ್ಧರಿಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪರ– ವಿರುದ್ಧದ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಲ್ಲಿ ಸೋಮವಾರ ಸಂಜೆಯಿಂದಲೇ ಪೋಸ್ಟ್‌ಗಳನ್ನು ಹಾಕಲಾಗುತ್ತಿದ್ದು, ಅವುಗಳು ಈಗ ವೈರಲ್‌ ಆಗಿವೆ.

ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ, ‘ಹೊಡಿರಿ ಹಲಗಿ!!! ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು!! ಲಿಂಗಾಯತ ಧರ್ಮಕ್ಕೆ ಜಯವಾಗಲಿ!!’ ಎಂದು ಪೋಸ್ಟ್ ಮಾಡಿದ್ದರೆ, ಇನ್ನೊಂದೆಡೆ ಶಾಸಕ ಅರವಿಂದ ಬೆಲ್ಲದ, ‘ನಮ್ಮ ರಾಜ್ಯದ ಲಿಂಗಾಯತರನ್ನು ನುಡಿದಂತೆ ಒಡೆದಿದ್ದೇವೆ. ಜಾತಿ ಧರ್ಮಗಳನ್ನು ಒಡೆಯಲು ‘ಸದಾ ಸಿದ್ಧ ಸರ್ಕಾರ’ ಎಂಬ ಒಕ್ಕಣೆಯೊಂದಿಗೆ ಸಿದ್ದರಾಮಯ್ಯ ಹಾಗೂ ಬಸವಣ್ಣನವರ ಭಾವಚಿತ್ರ ಹಾಕಿದ್ದಾರೆ.

ADVERTISEMENT

‘ನಮ್ಮ ನಡಿಗೆ ಧರ್ಮ ಒಡೆಯುವ ಕಡೆಗೆ’ ಎಂಬ ಪೋಸ್ಟ್‌ನಲ್ಲಿ ಸಿದ್ದರಾಮಯ್ಯ ಅವರು ಕೈಯಲ್ಲಿ ಸುತ್ತಿಗೆ ಹಿಡಿದುಕೊಂಡಿದ್ದಾರೆ.

‘ಇದು ಜಗತ್ತಿನ ಒಂಬತ್ತನೇ ಅದ್ಭುತ. ಪ್ರತ್ಯೇಕ ಧರ್ಮ ಸ್ಥಾಪನೆ ಮಾಡಿದವ ಆ ಧರ್ಮದ ಅನುಯಾಯಿಯಲ್ಲ!’ ಎಂದು ಫೇಸ್‌ಬುಕ್‌ ವಾಲ್‌ನಲ್ಲಿ ಒಬ್ಬರು ಬರೆದಿದ್ದಾರೆ. ಇನ್ನೊಬ್ಬರು, ‘ವೀರಶೈವರು, ಲಿಂಗಾಯತರನ್ನು ಮದುವೆಯಾಗಿದ್ದಾರೆ. ಲಿಂಗಾಯತರು, ವೀರಶೈವರನ್ನು ಮದುವೆಯಾಗಿದ್ದಾರೆ. ಎಲ್ಲರೂ ಸಂತೋಷದಿಂದ ಬಾಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯನವರು ವಿಚ್ಛೇದನ ಕೊಡಿಸಲು ತಯಾರಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಹೊಸ ಯೋಜನೆ– ‘ವಿಚ್ಛೇದನ ಭಾಗ್ಯ’ ಎಂಬ ಪೋಸ್ಟ್ ಹಾಕಿದ್ದಾರೆ.

ರಾಹುಲ್‌ ಗಾಂಧಿ ಭಾವಚಿತ್ರದೊಂದಿಗೆ ಅವನರ್ವ, ಅವನರ್ವ, ಅವನರ್ವ ಎಂದೂ, ಇನ್ನೊಂದೆಡೆ ಸಿದ್ದರಾಮಯ್ಯ ಭಾವಚಿತ್ರದೊಂದಿಗೆ ಹಾಕಿ ‘ಇವ ಒಡೆದವ, ಇವ ಒಡೆದವ, ಇವ ಒಡೆದವ’ ಎಂದೂ ಬರೆಯಲಾಗಿದೆ. ಇನ್ನೊಂದು ಪೋಸ್ಟ್‌ನಲ್ಲಿ ‘ಘಜನಿ, ಮೊಗಲ್‌, ಬ್ರಿಟಿಷ್, ಟಿಪ್ಪು ಇವರೆಲ್ಲ ಎಷ್ಟೇ ಪ್ರಯತ್ನ ಪಟ್ಟರೂ ಹಿಂದೂ ಧರ್ಮದ ಪಾವಿತ್ರ್ಯಕ್ಕೆ ಧಕ್ಕೆ ತರಲು ಸಾಧ್ಯವಾಗಿರಲಿಲ್ಲ. ಅವರ ಕೈಲಿ ಆಗದ್ದನ್ನು ಇಂದು ಸಿದ್ದರಾಮಯ್ಯ ಮಾಡವ್ನೆ’ ಎಂದು ಹಾಕಲಾಗಿದೆ.

ಮುಖ್ಯಮಂತ್ರಿ ಹಾಗೂ ಎಲ್ಲ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಪೋಸ್ಟ್‌ಗಳೂ ಸಾಕಷ್ಟು ಹರಿದಾಡುತ್ತಿವೆ.

ಉತ್ತರ ಕರ್ನಾಟಕ ಮಂದಿ ಗ್ರೂಪ್‌ನಲ್ಲಿ, ‘ತಮ್ಮಾ, ನಿ ಧರ್ಮ ಬ್ಯಾರೆ ಮಾಡು; ಬ್ಯಾರೆ ದೇಶ ಮಾಡು, ನಾ ಮೊದಲ ಹಿಂದೂ, ಹಿಂದೂಸ್ತಾನಿ. ಆಮ್ಯಾಲ ಲಿಂಗಾಯತ, ವೀರಶೈವ ಎಲ್ಲಾ. ನೆನಪಿಟ್ಕೊ, ಕೋಟಿ ಕೋಟಿ ಅನುದಾನ ಕೊಟ್ರು ನಾ ಮಾತ್ರ ಭಾರತ ಮಾತಾಕಿ ಜೈ ಅನ್ನಾವನ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.