ADVERTISEMENT

ಪಿಂಚಣಿ ಯೋಜನೆ ಅವೈಜ್ಞಾನಿಕ -ಟೀಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 19:40 IST
Last Updated 22 ಫೆಬ್ರುವರಿ 2011, 19:40 IST

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ರಾಜ್ಯ ಸರ್ಕಾರ ಪ್ರಕಟಿಸಿರುವ ಪಿಂಚಣಿ ಯೋಜನೆ ಅವೈಜ್ಞಾನಿಕವಾಗಿದ್ದು, ಇದನ್ನು ವಾಪಸ್ ಪಡೆಯದಿದ್ದರೆ ಮಾರ್ಚ್‌ನಲ್ಲಿ ನಿರಂತರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಎಚ್ಚರಿಕೆ ನೀಡಿದೆ.

‘ಅಂಗನವಾಡಿ ನೌಕರರಿಗೆ ಸ್ವಾವಲಂಬನಾ ಪಿಂಚಣಿ ಯೋಜನೆ ಬೇಡ, ಎಲ್‌ಐಸಿ ಆಧಾರಿತ ಪಿಂಚಣಿ ಯೋಜನೆ ಜಾರಿಗೆ ತನ್ನಿ ಎಂದು ಕಳೆದ ನವೆಂಬರ್ 15ರಿಂದ ಹೋರಾಟ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಕಿವಿಗೊಡುತ್ತಿಲ್ಲ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ, ಸಹ ಕಾರ್ಯದರ್ಶಿ ಎಸ್. ಸರೋಜ ಟೀಕಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಂಗಳವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿರುವ ಎನ್‌ಪಿಎಸ್ ಪಿಂಚಣಿ ಮೋಸ ಮಾಡುವ ಯೋಜನೆಯಾಗಿದೆ. ಇದನ್ನು ನೌಕರರ ಸಂಘ ತೀವ್ರವಾಗಿ ಖಂಡಿಸುತ್ತದೆ. ಯಾವುದೇ ಕಾರಣಕ್ಕೂ ಇದನ್ನು ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

ಪಿಂಚಣಿಯ ನಿಧಿಯನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಹೀಗಾಗಿ ಹೂಡಿಕೆಯ ಮೇಲೆ ಆದಾಯದ ಬಗ್ಗೆ ಯಾವುದೇ ಭರವಸೆ ಇಲ್ಲ. ಆದಾಯವು ಮಾರುಕಟ್ಟೆಯ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಆದಾಯ ಹೆಚ್ಚು ಕಡಿಮೆ ಆಗಬಹುದು. ಅಸಲು, ಬಡ್ಡಿಯ ಬಗ್ಗೆ ಯಾವುದೇ ಖಾತರಿ ಇರುವುದಿಲ್ಲ ಎಂದಿದ್ದಾರೆ.

55 ವರ್ಷ ಮೇಲ್ಪಟ್ಟವರನ್ನು ಈ ಯೋಜನೆಗೆ ಸೇರಿಸಿಲ್ಲ. 1975ರಲ್ಲಿ ಐಸಿಡಿಎಸ್‌ಗೆ ಅಡಿಪಾಯ ಹಾಕಿದ 13 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನಿವೃತ್ತಿ ವೇತನ ನೀಡದೆ ಕ್ರಮವಾಗಿ 50 ಮತ್ತು 30 ಸಾವಿರ ಪರಿಹಾರ ಕೊಟ್ಟು ಮನೆಗೆ ಕಳುಹಿಸಲಾಗುತ್ತಿದೆ. ಇದು ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.