ADVERTISEMENT

‘ಪಿಎಚ್‌.ಡಿ ಸಂಶೋಧಕರಿಗೆ ಮಾಸಿಕ ₹3,000 ಶಿಷ್ಯವೇತನ‌’

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 19:30 IST
Last Updated 28 ಫೆಬ್ರುವರಿ 2018, 19:30 IST
‘ಪಿಎಚ್‌.ಡಿ ಸಂಶೋಧಕರಿಗೆ ಮಾಸಿಕ ₹3,000 ಶಿಷ್ಯವೇತನ‌’
‘ಪಿಎಚ್‌.ಡಿ ಸಂಶೋಧಕರಿಗೆ ಮಾಸಿಕ ₹3,000 ಶಿಷ್ಯವೇತನ‌’   

ಬೆಂಗಳೂರು: ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಪಿಎಚ್‌.ಡಿ ಸಂಶೋಧಕರಿಗೆ ತಲಾ ₹3,000ದಂತೆ 10 ತಿಂಗಳು ಶಿಷ್ಯ ವೇತನ ನೀಡುವ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್‌. ಸೀತಾರಾಂ ತಿಳಿಸಿದರು.

ಪ್ರತಿ ವರ್ಷ ಅಂದಾಜು 1,000 ಸಂಶೋಧಕರಿಗೆ ₹3 ಕೋಟಿ ಅನುದಾನ ಒದಗಿಸಲಾಗುವುದು ಎಂದು ಅವರು ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ವಿಜ್ಞಾನ ತಂತ್ರಜ್ಞಾನ ಇಲಾಖೆ ಆರಂಭಿಸಿರುವ ಸಂಚಾರಿ ತಾರಾಲಯಗಳಿಗೆ ಬೇಡಿಕೆ ಹೆಚ್ಚಿದೆ. ಸದ್ಯ ಐದು ಸಂಚಾರಿ ತಾರಾಲಯಗಳಿವೆ. ಇನ್ನೂ
ಏಳು ಇಂಥ ತಾರಾಲಯಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ADVERTISEMENT

ಮಂಗಳೂರಿನ ಪಿಲಿಕುಳದಲ್ಲಿ ಬಹಳ ವರ್ಷಗಳಿಂದ ನನೆಗುದಿಯಲ್ಲಿದ್ದ ತ್ರಿಡಿ ತಾರಾಲಯ ಗುರುವಾರ (ಮಾ. 1) ಲೋಕಾರ್ಪಣೆಗೊಳ್ಳಲಿದೆ. ಧಾರವಾಡದಲ್ಲೂ ₹22 ಕೋಟಿ ವೆಚ್ಚದಲ್ಲಿ ತ್ರಿಡಿ ತಾರಾಲಯ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

ವಿಜ್ಞಾನದ ಅರಿವು ಮೂಡಿಸುವ ಉದ್ದೇಶದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿ ವರ್ಷ ಸುಮಾರು 1,200 ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಆಹ್ವಾನವೇ ಇರಲಿಲ್ಲ: ಇದೇ 26ರಂದು ಕೇಂದ್ರ ಸಚಿವರಾದ ಸದಾನಂದ ಗೌಡ ಮತ್ತು ಅನಂತ ಕುಮಾರ್ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನಡೆಸಿದ ಸಭೆಗೆ ಆಹ್ವಾನ ಇರಲಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

‘ಕೇಂದ್ರ ಸರ್ಕಾರಕ್ಕೆ ಇದ್ದಕ್ಕಿದ್ದಂತೆ ರಾಯಚೂರು ಹಾಗೂ ಯಾದಗಿರಿ ಅಭಿವೃದ್ಧಿ ನೆನಪಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಈ ಎರಡೂ ಜಿಲ್ಲೆಗಳ ಅಭಿವೃದ್ಧಿಗೆ ನಾಲ್ಕು ವರ್ಷಗಳಲ್ಲಿ ಹಲವು ಕೋಟಿ ಹಣ ಖರ್ಚು ಮಾಡಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.