ADVERTISEMENT

ಪುಟಗೋಸಿ ಚೇರ್ಮನ್‌ ಹುದ್ದೆ ಕೇಳಿರಲಿಲ್ಲ

ಕೈತಪ್ಪಿದ ಮಂಡಳಿ ಅಧ್ಯಕ್ಷ ಸ್ಥಾನ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಶಾಸಕ ಡಾ.ಕೆ.ಸುಧಾಕರ್ ಪರೋಕ್ಷ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 17:40 IST
Last Updated 6 ಮಾರ್ಚ್ 2019, 17:40 IST
ಶಾಸಕ ಡಾ.ಕೆ.ಸುಧಾಕರ್
ಶಾಸಕ ಡಾ.ಕೆ.ಸುಧಾಕರ್   

ಚಿಕ್ಕಬಳ್ಳಾಪುರ: ‘ಎರಡು ಬಾರಿ ಜೆಡಿಎಸ್‌ ಅಭ್ಯರ್ಥಿಯನ್ನು ಸೋಲಿಸುವ ಶಕ್ತಿ ಜನ ನನಗೆ ಕೊಟ್ಟಿರುವಾಗ ಇದ್ಯಾವುದು ಪುಟಗೋಸಿ ಚೇರ್ಮನ್‌ ಹುದ್ದೆ. ಅದನ್ನು ನಾನು ಕೇಳಿಯೇ ಇರಲಿಲ್ಲ. ಸಿದ್ದರಾಮಯ್ಯ ಅವರ ಹೆಸರನ್ನು ಒಂದಲ್ಲ ನೂರು ಬಾರಿ ಸಾರಿ ಹೇಳುವೆ. ಇವರ ಕೈಯಲ್ಲಿ ನನ್ನ ಶಾಸಕ ಸ್ಥಾನ ಕಿತ್ತುಕೊಳ್ಳಲು ಆಗುತ್ತದೆಯೇ? ಅದು ನಿಮ್ಮ ಹಣೆಬರಹದಲ್ಲಿ ಬರೆದಿಲ್ಲ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಶಾಸಕ ಡಾ.ಕೆ.ಸುಧಾಕರ್ ಪರೋಕ್ಷವಾಗಿ ಗುಡುಗಿದರು.

ಮಂಚೇನಹಳ್ಳಿ ಹೋಬಳಿಯ ಹನುಮಂತಪುರದಲ್ಲಿ ಬುಧವಾರ ನಡೆದ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸುಧಾಕರ್‌ ಅವರು ತಮ್ಮ ಭಾಷಣ ಉದ್ದಕ್ಕೂ ಪರೋಕ್ಷವಾಗಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

‘ಎಚ್.ಎನ್.ವ್ಯಾಲಿ, ಕೆ.ಸಿ ವ್ಯಾಲಿ ಯೋಜನೆಗಳಿಗೆ ಸಿದ್ದರಾಮಯ್ಯ ಅವರು ₹2,200 ಕೋಟಿ ಕೊಟ್ಟಿದ್ದಾರೆ. ಅವರ ಹೆಸರು ಹೇಳಿದರೆ ಸಾಕು ಕೆಲವರು ಹಾಗೇ ಬೆಚ್ಚಿ ಬೀಳುತ್ತಾರೆ. ಅವರ ಹೆಸರು ಹೇಳುವ ಹಾಗೇ ಇಲ್ಲ ನಾವು. ಉಪಕಾರ ಮಾಡಿದವರ ಹೆಸರು ತಿಳಿದುಕೊಳ್ಳುವುದು ಅಪರಾಧಾನಾ? ನಮ್ಮ ಭಾಗದ ಜನರಿಗೆ ಒಳ್ಳೆಯದು ಮಾಡಿರುವ ನಾಯಕರ ಬಗ್ಗೆ ಎರಡು ಒಳ್ಳೆಯ ಮಾತನಾಡಿದರೆ ನಿಮಗೆ ಏಕೆ ಇಷ್ಟೊಂದು ಉರಿ? ಮೈಯೆಲ್ಲ ಪರಚಿಕೊಳ್ಳುತ್ತೀರಲ್ಲ. ಅದೇಕೆ ಎಂದು ನನಗೆ ಗೊತ್ತಾಗುತ್ತಿಲ್ಲ’ ಎಂದು ಹೇಳಿದರು.

ADVERTISEMENT

‘ನಮ್ಮ ನಾಯಕರಾದ ರಾಹುಲ್‌ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ನನ್ನನ್ನು ಆಯ್ಕೆ (ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ) ಮಾಡಿದ್ದರು. ನೀವಲ್ಲ. ಇವರ ಕೈಯಲ್ಲಿ ಇದಕ್ಕಿಂತ ಹೆಚ್ಚು ಏನು ನಷ್ಟ ಮಾಡಲು ಆಗುತ್ತದೆ? ನೀವು ಅಧ್ಯಕ್ಷ ಹುದ್ದೆ ತಪ್ಪಿಸಿದರೆ ನನ್ನನ್ನು ಏನು ಮಾಡಬೇಕು ಎಂದು ರಾಹುಲ್ ಗಾಂಧಿ ಅವರಿಗೆ ಗೊತ್ತಿದೆ. ಅವರು ಅದನ್ನು ಮಾಡುತ್ತಾರೆ’ ಎಂದು ತಿರುಗೇಟು ನೀಡಿದರು.

‘ಕಾಂಗ್ರೆಸ್‌ ಪಕ್ಷ ನನ್ನನ್ನು ಗುರುತಿಸಿದೆ. ನೀವ್ಯಾರು ನನ್ನನ್ನು ಬೆಳೆಸಲು. ನೀವು ನನ್ನನ್ನು ಬೆಳೆಸಿದರೂ ಅಷ್ಟೇ ಬೆಳೆಸದಿದ್ದರೂ ಅಷ್ಟೇ. ನಿಮ್ಮನ್ನು ನಾನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ನಾನು ನನ್ನ ಜನರನ್ನು, ಕಾಂಗ್ರೆಸ್‌ ಪಕ್ಷವನ್ನು ಲೆಕ್ಕಕ್ಕೆ ಇಟ್ಟುಕೊಂಡಿರುವೆ. ನಮ್ಮ ಹೈಮಾಂಡ್‌ ಹೆಚ್ಚು ಬೈಯಬೇಡಿ ಎಂದು ಹೇಳಿದ್ದಾರೆ. ಆದರೆ ಇವರು ಮಾಡುವ ಚೇಷ್ಟೇ ಕಂಡು ಮೈಯೆಲ್ಲ ಉರಿಯುತ್ತದೆ. ಇಂತಹ ಜನರನ್ನು ಈ ದೇಶ ಕಂಡೇ ಇರಲಿಲ್ಲ. ಅದೇನು ಸೊಕ್ಕೋ ಅಪ್ಪಾ’ ಎಂದರು.

‘ಮುಂಬರುವ ಬರುವ ಲೋಕಸಭೆ ಚುನಾವಣೆಯಲ್ಲಿ ವೀರಪ್ಪ ಮೊಯಿಲಿ ಅವರೇ ಮತ್ತೊಮ್ಮೆ ನಮ್ಮ ಸಂಸದರಾಗಬೇಕು. ಚಿಕ್ಕಬಳ್ಳಾಪುರ ಕ್ಷೇತ್ರ ಕಾಂಗ್ರೆಸ್‌ಗೆ ನೀಡಬೇಕು. ಅದರಲ್ಲಿ ರಾಜೀ ಪ್ರಶ್ನೆಯೇ ಇಲ್ಲ. ಇದನ್ನು ನನ್ನ ಪಕ್ಷದ ವರಿಷ್ಠರಿಗೂ ಹೇಳುತ್ತೇನೆ. ಒಂದೊಮ್ಮೆ ಚಿಕ್ಕಬಳ್ಳಾಪುರ ಕ್ಷೇತ್ರ ಜೆಡಿಎಸ್‌ಗೆ ಕೊಟ್ಟರೆ ನಾವು ನೂರಕ್ಕೆ ನೂರು ವಿರುದ್ಧವಾಗಿ ಇರುತ್ತೇವೆ. ಯಾವುದೇ ಕಾರಣಕ್ಕೂ ಜೆಡಿಎಸ್ ಪರ ಕೆಲಸ ಮಾಡುವುದಿಲ್ಲ’ ಎಂದು ಕಾಂಗ್ರೆಸ್‌ ವರಿಷ್ಠರಿಗೆ ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ ಹೈಕಮಾಂಡ್‌ ಸುಧಾಕರ್ ಅವರ ಹೆಸರನ್ನು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿತ್ತು. ಆದರೆ ಆ ಹುದ್ದೆಗೆ ಅವರನ್ನು ನೇಮಕ ಮಾಡಲು ಕುಮಾರಸ್ವಾಮಿ ಅವರು ನಿರಾಕರಿಸಿದ್ದರು ಎನ್ನಲಾಗಿದೆ. ಆ ಸ್ಥಾನಕ್ಕೆ ರಾಜ್ಯ ಸರ್ಕಾರ ಇತ್ತೀಚೆಗೆ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸಿ.ಜಯರಾಂ ಅವರ ನೇಮಕ ಮಾಡಿದ್ದು, ಸುಧಾಕರ್‌ ಅವರನ್ನು ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.