ADVERTISEMENT

ಪೇಜಾವರ ಶ್ರೀಗಳ ಸಲಹೆ ಬೇಕಿಲ್ಲ: ನಿಜಗುಣಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST

ಧಾರವಾಡ: ’ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರ ಸಲಹೆ ನಮಗೆ ಬೇಕಿಲ್ಲ’ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

‘ದೇಶದಲ್ಲಿ ಹಿಂದೂ ಧರ್ಮ ಎನ್ನುವುದು ಪ್ರತ್ಯೇಕವಾಗಿಲ್ಲ ಎಂಬುದನ್ನು ಶ್ರೀಗಳು ತಿಳಿದುಕೊಳ್ಳಬೇಕು. ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ, ಈ ವಿಷಯದಲ್ಲಿ ಅವರ ಸಲಹೆ ಬೇಡ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವೀರಶೈವ, ಲಿಂಗಾಯತರು ಒಂದಾದರೆ ಮಾತ್ರ ಸಮಾಜಕ್ಕೆ ಬಲ ಬರುತ್ತದೆ ಎಂದು ಇತ್ತೀಚೆಗೆ ಶ್ರೀಗಳು ಹೇಳಿಕೆ ನೀಡಿದ್ದಾರೆ. ಲಿಂಗಾಯತ ಧರ್ಮಕ್ಕೆ ತನ್ನದೇ ಆದ ಸಿದ್ಧಾಂತ, ಪರಂಪರೆ ಇದೆ. ಶ್ರೀಗಳು ಒಂದು ಮತವನ್ನು ಪ್ರತಿಪಾದಿಸುವವರು. ಅದು ಅವರ ಕರ್ತವ್ಯ. ಇಂಥ ಹೇಳಿಕೆ ನೀಡುವ ಮೂಲಕ ತಾವು ಅಖಂಡ ಭಾರತದ ನೇತಾರರು ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ’ ಎಂದು ಟೀಕಿಸಿದರು

ADVERTISEMENT

‘ಲಿಂಗಾಯತ ಧರ್ಮಕ್ಕೆ ಮೂರುವರೆ ಕೋಟಿ ಅನುಯಾಯಿಗಳಿದ್ದಾರೆ ಹಾಗೂ ಮೂರು ಸಾವಿರ ವಿರಕ್ತ ಸ್ವಾಮಿಗಳಿದ್ದಾರೆ. ಪ್ರತ್ಯೇಕ ಧರ್ಮದ ಕುರಿತು ಅವರು ನಿರ್ಧಾರ ಕೈಗೊಳ್ಳುತ್ತಾರೆ. ಬೇಕಾದರೆ ನಮ್ಮ ಹೋರಾಟಕ್ಕೆ ಕೈ ಜೋಡಿಸಲಿ. ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿ. ಅದನ್ನು ಬಿಟ್ಟು ಧರ್ಮದ ಪ್ರತ್ಯೇಕ ಕೂಗು ಬೇಡ ಎಂದು ಹೇಳುವ ಅಗತ್ಯವಿಲ್ಲ’ ಎಂದರು.

‘ವೇಶ್ಯೆಯರು, ಮಾದರ ಸೇರಿದಂತೆ ಯಾವುದೇ ಸಮುದಾಯದವರು ಕೂಡಾ ಲಿಂಗಾಯತರಾಗಬಹುದು. ಇದಕ್ಕೆ ನಾನೇ ಸಾಕ್ಷಿ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಧರ್ಮದ ಆಧಾರದಲ್ಲಿಯೇ ಅಧಿಕಾರ ಅನುಭವಿಸಿದವರು. ಹೀಗಾಗಿ ಅವರು ಲಿಂಗಾಯತ ಧರ್ಮಕ್ಕೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ, ಲಿಂಗಾಯತ ಧರ್ಮ ಬಿಟ್ಟು ಚುನಾವಣೆಗೆ ಸ್ಪರ್ಧಿಸಲಿ’ ಎಂದು ಅವರು ಸವಾಲು ಹಾಕಿದರು.

***
ಪೇಜಾವರ ಶ್ರೀ ಅಭಿಪ್ರಾಯ ಅರ್ಥಪೂರ್ಣ– ರಂಭಾಪುರಿ ಸ್ವಾಮೀಜಿ
ಮಲೇಬೆನ್ನೂರು:
ಭಾರತದ ಸಂವಿಧಾನದಲ್ಲಿ ಹೊಸ ಧರ್ಮಕ್ಕೆ ಮಾನ್ಯತೆ ಪಡೆಯುವುದು ಸುಲಭವಲ್ಲ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

‘ಪ್ರತ್ಯೇಕ ಧರ್ಮ ಮಾನ್ಯತೆ ನೀಡುವ ಅಧಿಕಾರ ಮುಖ್ಯಮಂತ್ರಿ ಹಾಗೂ ಪ್ರಧಾನಿಗೆ ಇಲ್ಲ. ಸಂಸತ್ತು ನಿರ್ಧರಿಸಿ ಕಾನೂನು ರೂಪಿಸುತ್ತದೆ, ವೀರಶೈವ ಲಿಂಗಾಯತ ಬೇರೆಯಲ್ಲ, ಎರಡೂ ಒಂದೆ. ವೀರಶೈವ ಪ್ರಾಚೀನ ಪದ, ಲಿಂಗಾಯತ ಪದ ಸಂಸ್ಕಾರದಿಂದ ಬಂದಿದ್ದು, ಸಮಾನತೆ ಕಾಯಕ ತತ್ವ ಅನುಸರಿಸುತ್ತಿದೆ’ ಎಂದರು.
ಈಚೆಗೆ ಪೇಜಾವರ ಮಠಾಧೀಶರಾದ ವಿಶ್ವೇಶ ತೀರ್ಥ ಸ್ವಾಮೀಜಿ ಅವರೂ ವೀರಶೈವ ಲಿಂಗಾಯತ ಧರ್ಮದ ಕುರಿತ ವ್ಯಕ್ತಪಡಿಸಿದ ಅಭಿಪ್ರಾಯ ಅರ್ಥಪೂರ್ಣವಾಗಿದೆ. ಶಿವನ ಆರಾಧಕರೆಲ್ಲ ಹಿಂದೂಗಳೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.