ADVERTISEMENT

ಪೊಲೀಸರಿಗೂ ಕ್ಯಾಂಟೀನ್, ಶಾಲೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ಸುವರ್ಣ ಸೌಧ (ಬೆಳಗಾವಿ): ಸೇನಾಪಡೆಯ ಮಾದರಿಯಲ್ಲಿ ಪೊಲೀಸರಿಗೂ ಜಿಲ್ಲೆ­ಗೊಂದು ಕ್ಯಾಂಟೀನ್ (ಕಡಿಮೆ ದರದಲ್ಲಿ ವಿವಿಧ ಸಾಮಗ್ರಿ ಮಾರಾಟ ಮಳಿಗೆ) ಹಾಗೂ ವಸತಿ ಶಾಲೆ ತೆರೆಯಲಾಗುವುದು. ಕಾನ್‌ಸ್ಟೆಬಲ್‌ಗಳಿಗೆ ನೀಡುವ ಭತ್ಯೆಯನ್ನು ಹೆಚ್ಚಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿ.ರಾಮಕೃಷ್ಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪೊಲೀಸರಿಗೆ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಸರ್ಕಾರ ಉದಾಸೀನ ಮಾಡುವುದಿಲ್ಲ ಎಂದರು. ಪೊಲೀಸರಿಗಾಗಿ ೬೦೦ ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಹಾಗೂ ಪೊಲೀಸರ ಮಕ್ಕಳಿಗಾಗಿ ವೈದ್ಯಕೀಯ ಕಾಲೇಜನ್ನು ನಿರ್ಮಿಸ­ಲಾಗುವುದು ಎಂದು ಭರವಸೆ ನೀಡಿದರು.

ರಾಮಕೃಷ್ಣ ಅವರ ಪ್ರಶ್ನೆಗೆ ವಿರೋಧ ಪಕ್ಷದ ನಾಯಕ ಡಿ.ವಿ.ಸದಾನಂದಗೌಡ ಹಾಗೂ ಜೆಡಿಎಸ್‌ನ ಎಂ.ಸಿ.ನಾಣಯ್ಯ  ದನಿಗೂಡಿಸಿ, ರಾಜ್ಯ ರಕ್ಷಣೆಗಾಗಿ ಹಗಲಿರುಳು ದುಡಿಯುವ ಪೊಲೀಸರಿಗೆ ಎಷ್ಟೇ ಸೌಲಭ್ಯ ನೀಡಿದರೂ ಕಡಿಮೆಯೇ. ಅವರ ಕಡೆಗೆ ಹೆಚ್ಚು ಗಮನಹರಿಸಿ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ಸಚಿವರನ್ನು ಕೋರಿದರು. ಪಕ್ಷಭೇದ ಮರೆತು ಇಡೀ ಸದನ ಇದೇ ಆಗ್ರಹವನ್ನು ಬೆಂಬಲಿಸಿತು.

ಕಾನ್‌ಸ್ಟೆಬಲ್‌ಗಳ ವಾರದ ಭತ್ಯೆ, ವಿಶೇಷ ಭತ್ಯೆ ಇತ್ಯಾದಿಗಳನ್ನು ಹೆಚ್ಚಿಸಬೇಕು.  ಚುನಾವಣಾ ಸಂದರ್ಭ­ದಲ್ಲಿ ಕರ್ತವ್ಯ ನಿರ್ವಹಿಸುವ ಕಾನ್‌­ಸ್ಟೆಬಲ್‌­ಗಳಿಗೆ ಕೇವಲ ೪೦ರಿಂದ ೧೦೦ ರೂಪಾಯಿ ಭತ್ಯೆ ನೀಡಲಾಗುತ್ತಿದ್ದು ಇದನ್ನು ಹೆಚ್ಚಿಸಬೇಕು ಎಂದು ರಾಮಕೃಷ್ಣ  ಆಗ್ರಹಿಸಿದರು. ಕರ್ತವ್ಯನಿರತ ಪೊಲೀಸರು ಮೃತಪಟ್ಟರೆ ಅವರ ಅವಲಂಬಿತರಿಗೆ  ನೀಡಲಾಗುವ ವಿಮೆ ಮತ್ತಿತರ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಸಚಿವರು, ಪೊಲೀಸರಿಗಾಗಿ ೧೧ ಸಾವಿರ ಮನೆಗ­ಳನ್ನು ನಿರ್ಮಿ­ಸುವ ಟೆಂಡರ್ ಅಂಗೀಕಾರವಾಗಿದ್ದು 2 ವರ್ಷ­ಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಪೊಲೀಸ್ ಕ್ಯಾಂಟೀನ್‌ಗಳಲ್ಲಿ ಖರೀದಿಸುವ ಸಾಮಗ್ರಿಗಳನ್ನು ವ್ಯಾಟ್ ನಿಂದ ಮುಕ್ತಗೊಳಿಸುವ ಪ್ರಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಈಗ ಮೂರು ಪೊಲೀಸ್ ಶಾಲೆಗಳಿದ್ದು ಇಂಥ ಶಾಲೆಗಳನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದರು. ಈಚೆಗೆ ಚಿಕ್ಕಬಳ್ಳಾಪುರ­ದಿಂದ  ಮಹಿಳೆಯನ್ನು ಅಪಹರಿಸಿ ವೇಶ್ಯಾವಾಟಿಕೆಗೆ ಮಾರಿದಂಥ ಪ್ರಕರಣ­ಗಳನ್ನು ತಡೆಗೆ ರಾಜ್ಯ­ದಲ್ಲಿ ಕೈಗೊಂಡ ಕ್ರಮಗಳ ಕುರಿತು ವೈ.ಎ.ನಾರಾಯಣ­ಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು,  ಮಾನವ ಕಳ್ಳ ಸಾಗಾಣಿಕೆ­ಯನ್ನು ತಡೆಯಲು ಸಿಐಡಿಯಲ್ಲಿ ವಿಶೇಷ ಘಟಕ­ವೊಂದನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

22 ಸಾವಿರ ಸಿಬ್ಬಂದಿ ಕೊರತೆ
ನಗರಗಳಲ್ಲಿ ಸರಗಳ್ಳತನ ಹೆಚ್ಚಾಗಿದ್ದು ಇದನ್ನು ತಡೆಯಲು ಸಿಬ್ಬಂದಿಯ ಕೊರತೆ ಕಾಡುತ್ತಿದೆಯೇ ಎಂಬ ಎಂ.ಡಿ.ಲಕ್ಷ್ಮಿ­ನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಒಟ್ಟು ೨೨ ಸಾವಿರ ಪೊಲೀಸ್ ಸಿಬ್ಬಂದಿ ಕೊರತೆ ಇದ್ದು ೮,೫೦೦ ಮಂದಿಯ ನೇಮಕಾತಿಗೆ ಕ್ರಮ ಕೈಗೊಳ್ಳ­ಲಾಗಿದೆ.

ನೇಮಕಾತಿ ಪ್ರಕ್ರಿಯೆ ಪೂರ್ಣ­ಗೊಂಡ ನಂತರ ಕರ್ತವ್ಯಕ್ಕೆ ಹಾಜರಾಗಲು ಸುಮಾರು ಒಂದೂವರೆ ತಿಂಗಳು ಬೇಕಿರುವುದ­ರಿಂದ ತಾತ್ಕಾ­ಲಿಕ­ವಾಗಿ ೭ ಸಾವಿರ ಗೃಹ ರಕ್ಷಕ ದಳ ಸಿಬ್ಬಂದಿ­ಯನ್ನು ನೇಮಕ ಮಾಡಲಾಗು­ವುದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.