ADVERTISEMENT

ಪೊಲೀಸ್‌ ಇನ್‌ಸ್ಪೆಕ್ಟರ್‌ ಸಾವು: 41ಮನೆಗಳಿಗೆ ಹಾನಿ

ಏಳು ಜಿಲ್ಲೆಗಳಲ್ಲಿ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:59 IST
Last Updated 10 ಸೆಪ್ಟೆಂಬರ್ 2013, 19:59 IST
ಕಂಪ್ಲಿ ಸಮೀಪದ ದರೋಜಿ ಕೆರೆಗೆ ತುಂಗಾಭದ್ರಾ ಬಲದಂಡೆ  ಮುಖ್ಯ ಕಾಲುವೆಯಿಂದ ಪೂರೈಕೆಯಾಗುವ ನೀರಿನ ತೂಬು ಮಳೆಯಿಂದಾಗಿ ಕುಸಿದಿದೆ
ಕಂಪ್ಲಿ ಸಮೀಪದ ದರೋಜಿ ಕೆರೆಗೆ ತುಂಗಾಭದ್ರಾ ಬಲದಂಡೆ ಮುಖ್ಯ ಕಾಲುವೆಯಿಂದ ಪೂರೈಕೆಯಾಗುವ ನೀರಿನ ತೂಬು ಮಳೆಯಿಂದಾಗಿ ಕುಸಿದಿದೆ   

ಬೆಂಗಳೂರು: ರಾಜ್ಯದ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಬೆಳಗಾವಿ, ಬಳ್ಳಾರಿ, ಬಾಗಲಕೋಟೆ, ಗದಗ ಮತ್ತಿತರ ಜಿಲ್ಲೆಗಳಲ್ಲಿ  ಸೋಮವಾರ ರಾತ್ರಿ ಹಾಗೂ ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಒಬ್ಬರು ಇನ್‌ಸ್ಪೆಕ್ಟರ್‌ ಸೇರಿ ಮೂವರು ಮೃತಪಟ್ಟಿದ್ದು ಹಲವಾರು ಮನೆಗಳಿಗೆ ಹಾನಿಯಾಗಿದೆ.

ದಾವಣಗೆರೆ ವರದಿ: ದಾವಣಗೆರೆಯ ಲಾಲ್‌ ಬಹದ್ದೂರ್‌ ಶಾಸ್ತ್ರಿನಗರ, ಎಸ್‌. ಎಸ್‌ .­ಮಲ್ಲಿ­ಕಾರ್ಜುನ ನಗರ, ಬೀಡಿ ಕಾರ್ಮಿಕರ ಬಡಾವಣೆಯಲ್ಲಿ  41 ಮನೆಗಳಿಗೆ ಹಾನಿಯಾಗಿದೆ. ಬೀಡಿ ಕಾರ್ಮಿಕರ ಬಡಾವಣೆಯಲ್ಲಿ ರಾಜಗಾಲುವೆ ಹೊಂದಿರುವ ಮೋರಿ ಉಕ್ಕಿಹರಿದು 35ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿವೆ. ಸುಮಾರು ₨ 4 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ.

ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಮಾಡಲಗೇರಿಯ-1, ಹಾರಕನಾಳು ಸಣ್ಣ ತಾಂಡಾ-1, ಎರಡೆತ್ತಿನಹಳ್ಳಿ-1, ಮಾಡಲ­ಗೇರಿ ತಾಂಡಾ ದಲ್ಲಿ -2 ಮನೆಗಳಿಗೆ ಹಾನಿ ಸಂಭವಿಸಿದೆ. ಸುಮಾರು ₨ 10 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಹಾರಕನಾಳು ಸಣ್ಣ ತಾಂಡಾದಲ್ಲಿ ಗೋಡೆ ಕುಸಿದು ಮೇಕೆಮರಿ ಮೃತಪಟ್ಟ ಘಟನೆ ಸಂಭವಿಸಿದೆ.

ಶಿವಮೊಗ್ಗ ವರದಿ: ಮಂಗಳವಾರ ಮಧ್ಯಾಹ್ನ 1 ಗಂಟೆಗೂ ಹೆಚ್ಚು ಹೊತ್ತು ಧಾರಾಕಾರ ಮಳೆ ಸುರಿದ ಕಾರಣ ನಗರದ ಬಹುತೇಕ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತ­ಗೊಂಡಿತು. ಹಲವು ಕಡೆ ರಸ್ತೆ ಮೇಲೆ ಮಳೆ ನೀರು ಉಕ್ಕಿ ಹರಿದಿದೆ. ಇಮಾಮ್‌ಬಾಡ ಸುತ್ತಲಿನ ಬಡಾವಣೆಗಳ ತಗ್ಗುಪ್ರದೇಶ­ಗಳಿಗೆ ನೀರು ನುಗ್ಗಿದೆ. ಇದರಿಂದ ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ನಾಗರಕರು ತೊಂದರೆ ಅನುಭವಿಸಿದರು.

ಚಿತ್ರದುರ್ಗ ವರದಿ: ಜಿಲ್ಲೆಯ ವಿವಿಧೆಡೆ ಮಳೆಯಾಗಿದು್ದ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗದಲ್ಲಿ ಸೋಮವಾರ ೭೪.೬ ಮಿ.ಮೀ ಮಳೆ ದಾಖಲಾಗಿದ್ದು ಇದು ಒಂದೇ ದಿನದಲ್ಲಿ ಬಿದ್ದ ಅತಿ ಹೆಚ್ಚು ಮಳೆಯಾಗಿದೆ. 

ಸಿಡಿಲಿಗೆ ಇಬ್ಬರು ಬಲಿ (ಹುಬ್ಬಳ್ಳಿ ವರದಿ): ಬೆಳಗಾವಿ, ಬಳ್ಳಾರಿ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ಸೋಮವಾರ ರಾತ್ರಿಯಿಂದ ಸತತ ಮಳೆಯಾಗಿದ್ದು ಸಿಡಿಲು ಬಡಿದು ಇಬ್ಬರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ರಾಮತೀರ್ಥ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಅಥಣಿ ತಾಲ್ಲೂಕಿನಲ್ಲಿ ಮಳೆ ಸುರಿಯುವ ಸಂದರ್ಭದಲ್ಲಿ ದನ ಮೇಯಿಸುತ್ತಿದ್ದ ಅನಿಲ್‌ ಲಕ್ಷ್ಮಣ ಬಾಗೆನ್ನವರ (19) ಮತ್ತು ರಾಮು ಪಾರೀಸ ಅಲಗೂರ (50) ಮೃತಪಟ್ಟಿದ್ದಾರೆ.

ವಿವಿಧೆಡೆ ಮಳೆ: ಉತ್ತರ ಕರ್ನಾಟಕ ಭಾಗದ ಬಳ್ಳಾರಿ, ಬಾಗಲಕೋಟೆ, ಉತ್ತರ ಕನ್ನಡ ಮತ್ತು ಧಾರವಾಡ, ಗದಗ ಜಿಲ್ಲೆಗಳಲ್ಲಿ ಮಂಗಳವಾರ ಮಳೆಯಾಗಿದೆ. ಬಳ್ಳಾರಿ ನಗರವೂ ಒಳಗೊಂಡಂತೆ ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.

ನಗರದಲ್ಲಿ ಮಂಗಳವಾರ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಮಳೆ ಸುರಿಯಿತು. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲ್ಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ ಮತ್ತು ಹೊನ್ನಾವರದಲಿ್ಲ ಮತ್ತು ಘಟ್ಟ ಪ್ರದೇಶ­ಗಳಲ್ಲಿ ಮಂಗಳವಾರ ತುಂತುರು ಮಳೆಯಾಗಿದೆ. ಇದಲ್ಲದೆ ಬಾಗಲಕೋಟೆಯಲ್ಲಿ ತುಂತುರು ಮಳೆಯಾಗಿದೆ. ಆದರೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ-ಧಾರವಾಡದಲ್ಲಿ ರಭಸದ ಮಳೆಯಾಗಿದೆ.

ಕಂಪ್ಲಿ ವರದಿ: ಬಳ್ಳಾರಿ ಜಿಲ್ಲೆಯ ಕಂಪ್ಲಿ ಸಮೀಪದ ದರೋಜಿ ಕೆರೆಗೆ ತುಂಗಾಭದ್ರಾ ಬಲದಂಡೆ ಮೇಲ್ಮಟ್ಟದ ಮುಖ್ಯ ಕಾಲುವೆಯಿಂದ ಪೂರೈಕೆಯಾಗುವ ನೀರಿನ ತೂಬು ಮಳೆಯಿಂದ ಕುಸಿದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಈ ತೂಬಿನ ಮೂಲಕ ಕೆರೆಗೆ ನಿತ್ಯ ಸುಮಾರು 50 ರಿಂದ 80ಕೂ್ಯಸೆಕ್‌ ನೀರು ಬಿಡಲಾಗುತ್ತಿತ್ತು. ತೂಬು ಕುಸಿದ ಪರಿಣಾಮ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.

ಕೆರೆ ಭರ್ತಿಯಾಗಲು 0.610 ಟಿಎಂಸಿ ನೀರು ಅವಶ್ಯವಿದ್ದು, ಸದ್ಯ 0.20 ಟಿಎಂಸಿ ನೀರು ಮಾತ್ರ ಇದೆ. ಇದರಿಂದ ಮುಂಗಾರು ಹಂಗಾಮಿನ ಫಸಲಿಗೆ ನೀರಿನ ತೊಂದರೆಯಾಗಲಿದ್ದು, ರೈತರು ಆತಂಕಗೊಂಡಿದ್ದಾರೆ.

ADVERTISEMENT

ಇನ್‌ಸ್ಪೆಕ್ಟರ್‌ ನೀರುಪಾಲು
ದಾವಣಗೆರೆ ನಗರದಲ್ಲಿ ಮಂಗಳ­ವಾರ ರಾತ್ರಿ ಸುರಿದ ಮಳೆಗೆ ತುಂಬಿ ಹರಿದ ಮೋರಿಯಲ್ಲಿ ಬಿದ್ದು ಪೊಲೀಸ್‌ ಇನ್‌ಸ್ಪೆಕ್ಟರ್‌ ಒಬ್ಬರು ನೀರುಪಾಲಾದ ಘಟನೆ ಸೋಮವಾರ ನಗರದಲ್ಲಿ ಸಂಭವಿಸಿದೆ.

ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯ ಅಬಕಾರಿ ಮತ್ತು ಲಾಟರಿ ನಿಷೇಧ ದಳದ ಇನ್‌ಸ್ಪೆಕ್ಟರ್‌ ಚಂದ್ರಪ್ಪ (46) ಮೃತ ದುರ್ದೈವಿ. ಮೂಲತಃ ಕೂಡ್ಲಿಗಿ ತಾಲ್ಲೂಕು ಓಬಳಾಪುರದ ಚಂದ್ರಪ್ಪ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ದಾವಣಗೆರೆ ನಗರದ ಸರಸ್ವತಿ ಬಡಾವಣೆಯಲ್ಲಿ ಮನೆ ಮಾಡಿದ್ದು, ಕರ್ತವ್ಯ ಮುಗಿಸಿ ಹಬ್ಬಕ್ಕಾಗಿ ನಗರಕ್ಕೆ ಬಂದಿದ್ದಾರೆ. ಬಸ್‌ ಇಳಿದು ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಮೋರಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.