ADVERTISEMENT

ಪೊಲೀಸ್ ದೌರ್ಜನ್ಯ: ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 19:59 IST
Last Updated 19 ಡಿಸೆಂಬರ್ 2012, 19:59 IST

ಬೆಂಗಳೂರು: `ಬೆಳಗಾವಿಯಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಪೊಲೀಸರು ನಡೆಸಿದ ದೌರ್ಜನ್ಯವನ್ನು ನಿವೃತ್ತ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನು ನೇಮಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು' ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯು ಆಗ್ರಹಿಸಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಬಿ.ಎ.ಕೇಶವಮೂರ್ತಿ ಮಾತನಾಡಿ, `ಸುವರ್ಣ ಸೌಧದ ಮುಂದೆ ನಡೆದ ಹೋರಾಟಗಾರರ ಮನವಿಯನ್ನು ಸ್ವೀಕರಿಸಲು ಬರದೇ ನಿರ್ಲಕ್ಷ್ಯ ತೋರಿದ ಮುಖ್ಯಮಂತ್ರಿಯವರ ವರ್ತನೆ ಸರಿಯಿಲ್ಲ' ಎಂದು ಖಂಡಿಸಿದರು. `ಹೋರಾಟಗಾರರ ಮೇಲೆ ಪೊಲೀಸರು ಯಾವುದೇ ಮುನ್ಸೂಚನೆಯೇ ಇಲ್ಲದೆ, ಲಾಠಿ ಪ್ರಹಾರ ನಡೆಸಿದರು.

ಮಹಿಳೆಯರು ಮತ್ತು ಮಕ್ಕಳೆನ್ನದೆ ಅಶ್ರುವಾಯು ಮತ್ತು ಶೆಲ್ ದಾಳಿ ಮಾಡಿ ದೌರ್ಜನ್ಯವನ್ನು ಎಸಗಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸಹಿಸದ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟವನ್ನು ಮಾಡ್ದ್ದಿದಾರೆ. ಅದನ್ನೇ ಮುಂದಾಗಿಟ್ಟುಕೊಂಡು ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ' ಎಂದರು. `ಬೇಟೆಯಾಡುವಂತೆ 15 ಕಿ.ಮೀ. ವರೆಗೂ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ 65 ಜನ, ಮಾಳಮಾರುತಿ ಠಾಣೆಯಲ್ಲಿ 75 ಜನ, ಗ್ರಾಮಾಂತರ ಠಾಣೆಯಲ್ಲಿ 17 ಜನ ಸೇರಿದಂತೆ  ಇನ್ನೂ 8 ಠಾಣೆಗಳಲ್ಲಿ 300 ಕ್ಕೂ ಹೆಚ್ಚು ಜನರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದಾಗಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಆಶ್ವಾಸನೆ ನೀಡಿದ್ದಾರೆ. ಆದರೆ, ಈವರೆಗೂ ಕ್ರಮಗಳನ್ನು ಕೈಗೊಂಡಿಲ್ಲ. ಆದ್ದರಿಂದ ಈ ಕೂಡಲೇ ದಾಖಲಾದ ಪ್ರಕರಣ ಕೈ ಬಿಡಬೇಕು' ಎಂದು ಒತ್ತಾಯಿಸಿದರು.

`ತೀವ್ರತರವಾಗಿ ಪೆಟ್ಟು ಬಿದ್ದು ಗಾಯಗೊಂಡಿರುವವರಿಗೆ ಸರ್ಕಾರವೇ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಎಂದರು.
`ಜನರನ್ನು ಕರೆತಂದಿದ್ದ  250 ಖಾಸಗಿ ವಾಹನಗಳ ಗಾಜುಗಳನ್ನು ಪೊಲೀಸರು ಲಾಠಿಗಳನ್ನು ಬೀಸಿ ಒಡೆದು ಹಾಕಿದ್ದಾರೆ. ಇದಕ್ಕೆ ಆಗಿರುವ ನಷ್ಟವನ್ನು ಪ್ರತಿಭಟನಾಕಾರರೇ ಭರಿಸಬೇಕಾಗಿದೆ. ಪೊಲೀಸರ ಈ ಕ್ರಮ ಖಂಡನೀಯವಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.