ADVERTISEMENT

ಪ್ರತಿ ತಿಂಗಳ 7ರೊಳಗೆ ಪಿಂಚಣಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ಬೆಂಗಳೂರು:  ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಾದ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಮಾರ್ಚ್‌ನಿಂದ ಪ್ರತಿ ತಿಂಗಳ ಏಳನೇ ತಾರೀಖಿನೊಳಗೆ ಪಿಂಚಣಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಗುರುವಾರ ವಿಧಾನ ಪರಿಷತ್ತಿಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಇ. ಕೃಷ್ಣಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಡಿಸೆಂಬರ್‌ವರೆಗೂ ಪಿಂಚಣಿ ನೀಡಲಾಗಿದೆ. ಆದರೆ, ಪರಿಶೀಲನಾ ಕಾರ್ಯದ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳ ಪಿಂಚಣಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಎಂದರು.

2006-07ರಲ್ಲಿ ಈ ಯೋಜನೆಗಳ ಫಲಾನುಭವಿಗಳ ಸಂಖ್ಯೆ 16 ಲಕ್ಷದಷ್ಟಿದ್ದರೆ, 2010-11ರ ವೇಳೆಗೆ ಈ ಸಂಖ್ಯೆ 40.88 ಲಕ್ಷಕ್ಕೇರಿದೆ. ಪರಿಶೀಲನೆ ಬಳಿಕ 5.19 ಲಕ್ಷ ಅನರ್ಹ ಫಲಾನುಭವಿಗಳ ಹೆಸರನ್ನು ಕೈಬಿಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ 250 ಕೋಟಿ ರೂಪಾಯಿ ನಷ್ಟವಾಗುವುದನ್ನು ತಪ್ಪಿಸಬಹುದಾಗಿದೆ ಎದರು.

ಬಳ್ಳಾರಿ, ವಿಜಾಪುರ, ಬಾಗಲಕೋಟೆ ಹಾಗೂ ರಾಯಚೂರು ಜಿಲ್ಲೆಗಳನ್ನು ಹೊರತುಪಡಿಸಿ ಪರಿಶೀಲನಾ ಕಾರ್ಯ ಪೂರ್ಣಗೊಂಡಿರುವ 26 ಜಿಲ್ಲೆಗಳಲ್ಲಿ ಈ ಯೋಜನೆಗಳಡಿ ಹೊಸ ಮಂಜೂರಾತಿ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.