ADVERTISEMENT

ಪ್ರತ್ಯೇಕ ರಾಜ್ಯ: ಗಂಭೀರ ಚಿಂತನೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2012, 19:05 IST
Last Updated 4 ನವೆಂಬರ್ 2012, 19:05 IST
ಪ್ರತ್ಯೇಕ ರಾಜ್ಯ: ಗಂಭೀರ ಚಿಂತನೆ ಅಗತ್ಯ
ಪ್ರತ್ಯೇಕ ರಾಜ್ಯ: ಗಂಭೀರ ಚಿಂತನೆ ಅಗತ್ಯ   

ಬೆಂಗಳೂರು: `ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ವಿರೋಧಿಸುವ ಮೊದಲು ಈ ಬೇಡಿಕೆಗೆ ಕಾರಣಗಳೇನು ಎಂಬ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ~ ಎಂದು ಲೇಖಕ ಡಾ.ಪಿ.ವಿ.ನಾರಾಯಣ ಹೇಳಿದರು.
ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಕನ್ನಡ ನಾಡಿನ ಏಕೀಕರಣ, ಪ್ರತ್ಯೇಕತೆ ಕೂಗು~ ವಿಷಯದ ಬಗ್ಗೆ ಅವರು ಮಾತನಾಡಿದರು.

`ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮೂಲಸೌಕರ್ಯಗಳ ಕೊರತೆಯಿಂದ ಉತ್ತರ ಕರ್ನಾಟಕ ಬಳಲಿದೆ. ಹೀಗಾಗಿ ಆ ಭಾಗದ ಜನರು ಪ್ರತ್ಯೇಕತೆಯ ಬಗ್ಗೆ ದನಿ ಎತ್ತಿದ್ದಾರೆ. ಸಮಸ್ಯೆಗಳಿಂದ ಬೇಸತ್ತು ಈ ಜನರು ಪ್ರತ್ಯೇಕ ರಾಜ್ಯ ಬೇಕು ಎನ್ನುತ್ತಿದ್ದಾರೆಯೇ ಹೊರತು, ಅವರು ಕನ್ನಡ ಭಾಷೆಯಿಂದ ಪ್ರತ್ಯೇಕವಾಗುವ ಮಾತನ್ನಾಡುತ್ತಿಲ್ಲ~ ಎಂದು ನುಡಿದರು.

`ವಿಜಾಪುರ, ಬೀದರ್, ಗುಲ್ಬರ್ಗ ಸೇರಿದಂತೆ ಹೈದರಾಬಾದ್ - ಕರ್ನಾಟಕ, ಮುಂಬೈ - ಕರ್ನಾಟಕ ಭಾಗದ ಜನರು ಪ್ರತ್ಯೇಕತೆಯ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಪ್ರತ್ಯೇಕತೆಯನ್ನು ವಿರೋಧಿಸುವ ಬದಲು ಉತ್ತರ ಕರ್ನಾಟಕ ಭಾಗಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲು ರಾಜಕಾರಣಿಗಳ ಮೇಲೆ ಒತ್ತಡ ತರಬೇಕು. ಸಮಸ್ಯೆಗಳು ನಿವಾರಣೆಯಾದರೆ ಪ್ರತ್ಯೇಕವಾಗಲು ಯಾರೂ ಬಯಸುವುದಿಲ್ಲ~ ಎಂದರು.

`ನವೋದಯ ಕಾಲದ ಅನೇಕ ಹಿರಿಯ ಸಾಹಿತಿಗಳು ಕರ್ನಾಟಕದ ಏಕೀಕರಣವನ್ನು ಒಪ್ಪಿರಲಿಲ್ಲ. ಉತ್ತರ ಕರ್ನಾಟಕದ ಜನರಿಗೆ ಪ್ರತ್ಯೇಕ ರಾಜ್ಯವೇ ನಿರ್ಮಾಣವಾಗಲಿ ಎಂದು ಡಿವಿಜಿ ಅಭಿಪ್ರಾಯಪಟ್ಟಿದ್ದರು. ಪ್ರತ್ಯೇಕ ರಾಜ್ಯವೊಂದು ಉದಯಿಸಿದರೆ ಅದರಿಂದ ಕನ್ನಡಕ್ಕೇ ಲಾಭವಿದೆ ಎಂಬ ವಾದವೂ ಇದೆ. ಇದರಿಂದ ಕನ್ನಡ ಮಾತನಾಡುವ ಎರಡು ರಾಜ್ಯಗಳಿವೆ ಎಂಬ ಹೆಮ್ಮೆ ಕನ್ನಡಿಗರದ್ದಾಗಲಿದೆ~ ಎಂದು ಅವರು ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.