ADVERTISEMENT

ಪ್ರತ್ಯೇಕ ಲಿಂಗಾಯತ ಧರ್ಮ: ಪರಿಶೀಲನೆಗೆ ಸಮಯಾವಕಾಶ ಕೋರಿದ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 2:16 IST
Last Updated 20 ಜೂನ್ 2018, 2:16 IST
ಪ್ರತ್ಯೇಕ ಲಿಂಗಾಯತ ಧರ್ಮ: ಪರಿಶೀಲನೆಗೆ ಸಮಯಾವಕಾಶ ಕೋರಿದ ಕೇಂದ್ರ ಸರ್ಕಾರ
ಪ್ರತ್ಯೇಕ ಲಿಂಗಾಯತ ಧರ್ಮ: ಪರಿಶೀಲನೆಗೆ ಸಮಯಾವಕಾಶ ಕೋರಿದ ಕೇಂದ್ರ ಸರ್ಕಾರ   

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವಿಷಯಕ್ಕೆ ಸಂಬಂಧಿಸಿದಂತೆ ಪರಿಶೀಲನೆಗೆ ಇನ್ನಷ್ಟು ಸಮಯಾವಕಾಶ ನೀಡುವಂತೆ ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ಮಂಗಳವಾರ ಮನವಿ ಮಾಡಿದೆ.

ಈ ಕುರಿತಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ‌.ನಾವದಗಿ ಅವರ ಮನವಿಯನ್ನು ಮನ್ನಿಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರ ಶಶಿಧರ ಶಾನುಭೋಗ ಅವರ ಪರ ವಕೀಲ ಗುರುಮಠ ಅವರು, 'ಈಗಾಗಲೇ ಈ ಹಿಂದಿನ ಕೇಂದ್ರ ಸರ್ಕಾರ ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ 2013ರ ನವೆಂಬರ್ 14ರಂದು ಬರೆದಿರುವ ಪತ್ರದಲ್ಲಿ, ಜನಗಣತಿಯಲ್ಲಿ ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಕಾಲಂ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಆದ್ದರಿಂದ ಮತ್ತೆ ಪರಿಶೀಲನೆಗೆ ಕಾಲಾವಕಾಶ ಕೋರಿಕೆ ಅನಗತ್ಯ' ಎಂದು ಪ್ರತಿ ಪಾದಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, 'ಇದು ನಿಮ್ಮ ಅರ್ಥೈಸುವಿಕೆ ಅಷ್ಟೇ' ಎಂದರು.

ಮತ್ತೊಬ್ಬ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಅಶೋಕ ಹಾರನಹಳ್ಳಿ, 'ಕೇಂದ್ರ ಸರ್ಕಾರದ ನಡೆ ಈ ಪ್ರಕರಣದ ಮೇಲೆ ಪರಿಣಾಮ ಬೀರುವುದಿಲ್ಲ. ಮೂಲಭೂತವಾಗಿ ನಾವು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕ್ರಮವನ್ನು ಪ್ರಶ್ನಿಸಿರುವುದು' ಎಂದರು.

ಅರ್ಜಿದಾರರ ಮನವಿ ಏನು?
*2017ರ ಡಿಸೆಂಬರ್ 22ರಂದು ರಾಜ್ಯ ಅಲ್ಪಸಂಖ್ಯಾತ ಆಯೋಗದ ನಡವಳಿಕೆ ಸಂವಿಧಾನ ಬಾಹಿರ.

* ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ನೇತೃತ್ವದ ತಜ್ಞರ ಸಮಿತಿ ರಚನೆ ಮಾಡಿರುವ ಆಯೋಗದ ಕ್ರಮವನ್ನು ರದ್ದುಗೊಳಿಸಬೇಕು ಎಂಬುದು ಅರ್ಜಿದಾರರ ಮನವಿ.

ಶಿಫಾರಸು ಕಡತ ಗೃಹ ಇಲಾಖೆ ಮುಂದಿದೆ-ಕೇಂದ್ರ ಸರ್ಕಾರ
ಲಿಂಗಾಯತ ಪ್ರತ್ಯೇಕ ಮಾನ್ಯತೆ ನೀಡುವಂತೆ ಕೋರಿರುವ ರಾಜ್ಯ ಸರ್ಕಾರದ ಶಿಫಾರಸು ಸದ್ಯ ಕೇಂದ್ರದ ಮುಂದಿದೆಯೇ ಅಲ್ಲವೇ ಎಂದು ನ್ಯಾಯಪೀಠ ನಾವದಗಿ ಅವರನ್ನು ಪ್ರಶ್ನಿಸಿತು‌.

ಇದಕ್ಕೆ ಉತ್ತರಿಸಿದ ನಾವದಗಿ ಅವರು, 'ಹೌದು ಸ್ವಾಮಿ ಕಡತ ಗೃಹ ಇಲಾಖೆ ಮುಂದೆ ಪರಿಶೀಲನೆಯಲ್ಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.