
ಬೆಂಗಳೂರು: ‘ಜಾತಿವಾದ ಹಾಗೂ ಕೋಮುವಾದಿಗಳಿಗೆ ಬುದ್ಧಿ ಕಲಿಸಲು ಪ್ರಭುತ್ವಕ್ಕೆ ಹತ್ತಿರ ಹೋಗುತ್ತಲೇ ಅಂತರವನ್ನು ಕಾಪಾಡುವುದು ಸಾಹಿತಿಗಳ ಜವಾಬ್ದಾರಿ’ ಎಂದು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬಿಎಂಟಿಸಿ ಆಶ್ರಯದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ ನೃಪತುಂಗ ಸಾಹಿತ್ಯ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಪ್ರಚಾರದಿಂದಲೇ ದೇಶವನ್ನು ಆಳುತ್ತೇನೆ ಎಂದು ಅಹಂಕಾರ ತೋರ್ಪಡಿಸುವವರಿಗೆ ನಾವು ಪೆಟ್ಟು ನೀಡಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಬುದ್ಧಿಜೀವಿಗಳು ಒಂದು ತೀರ್ಮಾನಕ್ಕೆ ಬಂದೆವು. ಆದರೆ, ನಾಡಿನ ಪ್ರಭುತ್ವಕ್ಕೆ ಎಷ್ಟು ಹತ್ತಿರವಾಗುತ್ತೆವೆಯೋ
ಅಷ್ಟೇ ದೂರವನ್ನು ಕಾಪಾಡುವುದು ನಮ್ಮ ಜವಾಬ್ದಾರಿ’ ಎಂದು ಅವರು ಪ್ರತಿಪಾದಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ‘ನೃಪತುಂಗ ಪ್ರಶಸ್ತಿ ಪ್ರದಾನಕ್ಕೆ ಪ್ರತಿವರ್ಷ ಮುಖ್ಯಮಂತ್ರಿ ಗೈರು ಹಾಜರಾಗುತ್ತಿದ್ದಾರೆ. ಮುಂದಿನ ವರ್ಷ ಮುಖ್ಯಮಂತ್ರಿ ಅವರು ಕಾರ್ಯಕ್ರಮದಲ್ಲಿ ಹಾಜರಾಗಬೇಕು’ ಎಂದು ವಿನಂತಿಸಿದರು.
ವಿಮರ್ಶಕ ಬಸವರಾಜ ಕಲ್ಗುಡಿ ಅಭಿನಂದನಾ ಭಾಷಣ ಮಾಡಿ, ‘ಬರಗೂರು ನಮ್ಮ ನಡುವಿನ ವಿಶಿಷ್ಟ ಪ್ರತಿಭೆ. ಅವರು ಮಾನವತಾವಾದಿ. ಸಂಘಟನಾ ಕೌಶಲ ಅವರ ವ್ಯಕ್ತಿತ್ವದಲ್ಲಿ ಅಡಗಿದೆ’ ಎಂದು ಬಣ್ಣಿಸಿದರು.
ನೃಪತುಂಗ ಪ್ರಶಸ್ತಿಯು ₨ 7,00,001 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಯುವ ಸಾಹಿತಿಗಳಿಗೆ ಅರಳು ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ತಲಾ ₨15,000 ಮೌಲ್ಯ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.