ADVERTISEMENT

ಪ್ರವಾಸೋದ್ಯಮ ಅಭಿವೃದ್ಧಿಗೆ ಶ್ರಮಿಸಲು ಕರೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2011, 19:30 IST
Last Updated 1 ಮಾರ್ಚ್ 2011, 19:30 IST

ಬೆಂಗಳೂರು: ‘ರಾಜ್ಯ ಪ್ರವಾಸೋದ್ಯಮವನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ಯಲು ಅಧಿಕಾರಿಗಳು ಶ್ರಮಿಸಬೇಕಿದೆ’ ಎಂದು ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಸೋಮಶೇಖರ ರೆಡ್ಡಿ ಕರೆ ನೀಡಿದರು. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಉದ್ಯೋಗಿಗಳ ಸಂಘ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂಘದ ದಿನಚರಿ ಪುಸ್ತಕ ಮತ್ತು ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಜನಾರ್ದನ ರೆಡ್ಡಿ ಪ್ರವಾಸೋದ್ಯಮ ಸಚಿವರಾದ ನಂತರ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ’ ಎಂದು ಅವರು ಹೇಳಿದರು. ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ವಿನಯ್ ಲೂತ್ರ ಮಾತನಾಡಿ ‘ಪ್ರವಾಸಿಗರಿಗೆ ಉತ್ತಮ ಸೇವೆ ನೀಡುವ ವಿಚಾರ ಇಲಾಖೆಗೆ ಸವಾಲಿನ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಹೆಚ್ಚು ಗಮನ ನೀಡಿದರೆ ರಾಜ್ಯ ಪ್ರವಾಸೋದ್ಯಮವು ಮೊದಲನೇ ಸ್ಥಾನಕ್ಕೆ ಏರಲಿದೆ’ ಎಂದು ಹೇಳಿದರು.

‘ಐದು ವರ್ಷಗಳ ಹಿಂದೆ 10ರಿಂದ 15 ಕೋಟಿಯಿದ್ದ ಇಲಾಖೆಯ ಆಯವ್ಯಯ ಈಗ 300ರಿಂದ 400 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ರಾಜ್ಯದ ಪ್ರವಾಸಿ ತಾಣಗಳಲ್ಲಿನ ಹೋಟೆಲ್‌ಗಳನ್ನು ಉನ್ನತ ದರ್ಜೆಗೇರಿಸಲಾಗಿದೆ’ ಎಂದು ಹೇಳಿದರು.  ‘ಪ್ರವಾಸ ಸಾರಿಗೆಗೆ 4 ವೋಲ್ವೊ ಬಸ್ ಹಾಗೂ 15 ಹವಾನಿಯಂತ್ರಿತ ಸೂಪರ್ ಡಿಲಕ್ಸ್ ಬಸ್‌ಗಳನ್ನು ಖರೀದಿಸಲಾಗಿದೆ. ಗೋಲ್ಡನ್ ಚಾರಿಯೇಟ್ ಯೋಜನೆಯಿಂದ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಮೆರುಗು ಬಂದಿದೆ’ ಎಂದರು. ಕೆಎಸ್‌ಟಿಡಿಸಿ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಬಿ. ಪ್ರಭುದೇವ್, ಸಂಘದ ಅಧ್ಯಕ್ಷ ಎಚ್. ರಾಮಚಂದ್ರ, ಸಂಘದ ಗೌರವ ಅಧ್ಯಕ್ಷ ಬಿ. ಪ್ರಭುದೇವ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.