ADVERTISEMENT

ಪ್ರಶ್ನೆ ಪತ್ರಿಕೆ ಅದಲು – ಬದಲು

‌45 ನಿಮಿಷದಲ್ಲಿ ಮತ್ತೊಂದು ಪ್ರಶ್ನೆ ಪತ್ರಿಕೆಗೆ ಉತ್ತರಿಸಿದ ವಿದ್ಯಾರ್ಥಿಗಳು; ನಾಲ್ವರು ಪರೀಕ್ಷೆಯಿಂದ ವಂಚಿತ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 19:47 IST
Last Updated 23 ಮಾರ್ಚ್ 2018, 19:47 IST
ಧಾರವಾಡ ಜಿಲ್ಲೆ ಕುಂದಗೋಳದಲ್ಲಿ ಮಲ್ಲಿಕಾರ್ಜುನ ಪ್ರೌಢಶಾಲೆ ಪರೀಕ್ಷಾ ಕೇಂದ್ರದ ಎದುರು ಗೊಂದಲದಲ್ಲಿ ನಿಂತಿರುವ ವಿದ್ಯಾರ್ಥಿಗಳು
ಧಾರವಾಡ ಜಿಲ್ಲೆ ಕುಂದಗೋಳದಲ್ಲಿ ಮಲ್ಲಿಕಾರ್ಜುನ ಪ್ರೌಢಶಾಲೆ ಪರೀಕ್ಷಾ ಕೇಂದ್ರದ ಎದುರು ಗೊಂದಲದಲ್ಲಿ ನಿಂತಿರುವ ವಿದ್ಯಾರ್ಥಿಗಳು   

ಕುಂದಗೋಳ (ಧಾರವಾಡ ಜಿಲ್ಲೆ): ಇಲ್ಲಿನ ಮಲ್ಲಿಕಾರ್ಜುನ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ಪುನರಾವರ್ತಿತ ಅಭ್ಯರ್ಥಿಗಳಿಗೆ ಕೊಡಬೇಕಾದ ಪ್ರಶ್ನೆಪತ್ರಿಕೆಯನ್ನು, ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ನೀಡಿದ್ದರಿಂದ ಉಂಟಾದ ಗೊಂದಲದಿಂದಾಗಿ ನಾಲ್ವರು ಪರೀಕ್ಷೆಯಿಂದ ವಂಚಿತರಾಗಿದ್ದಾರೆ.

ಪರೀಕ್ಷಾ ಕೇಂದ್ರದ ಬ್ಲಾಕ್‌ ಸಂಖ್ಯೆ 19 ಮತ್ತು 12ರಲ್ಲಿ ಒಟ್ಟು 24 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ, 18 ವಿದ್ಯಾರ್ಥಿಗಳು ಕನ್ನಡ ಹಾಗೂ 6 ವಿದ್ಯಾರ್ಥಿಗಳು ಉರ್ದು ಭಾಷೆ ಆಯ್ಕೆ ಮಾಡಿಕೊಂಡಿದ್ದರು.

ಕನ್ನಡ ಆಯ್ದುಕೊಂಡ ವಿದ್ಯಾರ್ಥಿಗಳಿಗೆ ಕೇಂದ್ರದ ಮೇಲ್ವಿಚಾರಕರು ಪುನರಾವರ್ತಿತ (ರಿಪೀಟರ್ಸ್‌) ಅಭ್ಯರ್ಥಿಗಳಿಗೆ ನೀಡಬೇಕಾದ ಪತ್ರಿಕೆ ನೀಡಿದ್ದರಿಂದ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ನಮಗೆ ನೀಡಿದ ಪ್ರಶ್ನೆ ಪತ್ರಿಕೆ ಆಧಾರದಲ್ಲಿಯೇ ನಾವು ಉತ್ತರ ಬರೆಯುತ್ತಿದ್ದೆವು. ಪಠ್ಯಕ್ರಮ ಬೇರೆಯಾಗಿದೆ ಎಂಬ ಅನುಮಾನ ಬಂದಿತು. ಪರಿಶೀಲಿಸಿದಾಗ ಬೇರೆ ಪ್ರಶ್ನೆ ಪತ್ರಿಕೆ ನೀಡಿರುವುದು ಗಮನಕ್ಕೆ ಬಂತು. ಮೇಲ್ವಿಚಾರಕರ ಗಮನಕ್ಕೆ ತಂದೆವು. ಆದರೂ ಅವರು ಗಮನ ನೀಡದೆ ಪರೀಕ್ಷೆ ಅವಧಿ ಮುಗಿಯುವವರೆಗೆ ಸುಮ್ಮನಿದ್ದರು’ ಎಂದು ವಿದ್ಯಾರ್ಥಿಗಳು ದೂರಿದರು.

‘ಪರೀಕ್ಷೆ ಮುಗಿದ ನಂತರ, ನಾವು ಈ ಬಗ್ಗೆ ಅಧಿಕಾರಿಗಳಲ್ಲಿ ಪ್ರಶ್ನೆ ಮಾಡಿದೆವು. ನಮಗೆ ಅನ್ಯಾಯವಾಗಿದೆ. ಅನುತ್ತೀರ್ಣವಾಗುವ ಆತಂಕವಿದೆ ಎಂದು ಅಳಲು ತೋಡಿಕೊಂಡೆವು. ಆಗ, ಕೊಠಡಿ ಮೇಲ್ವಿಚಾರಕರು ಮಧ್ಯಾಹ್ನ 3ಕ್ಕೆ ನಿಗದಿತ ಪ್ರಶ್ನೆ ಪತ್ರಿಕೆ ನೀಡಿ ಪರೀಕ್ಷೆ ಬರೆಯಿಸಿದರು. ಆದರೆ, ಕೇವಲ 45 ನಿಮಿಷ ಮಾತ್ರ ಸಮಯ ನೀಡಿದರು. ಅಷ್ಟೊತ್ತಿಗಾಗಲೇ ನಾಲ್ಕು ವಿದ್ಯಾರ್ಥಿಗಳು ಮನೆಗೆ ಹೋಗಿದ್ದರಿಂದ ಅವರು ಪರೀಕ್ಷೆಯಿಂದ ವಂಚಿತರಾದರು’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

‘ಪ್ರಶ್ನೆಪತ್ರಿಕೆ ಬದಲಾಗಿರುವ ಕುರಿತು ನನಗೆ ಮಾಹಿತಿ ಇಲ್ಲ. ಆದರೆ, ಕೆಲವು ವಿದ್ಯಾರ್ಥಿಗಳು ಕರೆ ಮಾಡಿದ್ದಾರೆ. ಪರೀಕ್ಷಾ ಮೇಲ್ವಿಚಾರಕರಿಂದ ವರದಿ ಕೇಳಿದ್ದೇನೆ’ ಎಂದು ಕುಂದಗೋಳ ಬಿಇಒ ಜಿ.ಎನ್. ಮಠಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.