ADVERTISEMENT

ಫಲಿತಾಂಶಕ್ಕೆ ಕಾಯುತ್ತಿದ್ದೇನೆ -ಸಿ.ಎಂ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 19:30 IST
Last Updated 5 ಜುಲೈ 2012, 19:30 IST

ಕೋಲಾರ: ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ದೆಹಲಿಗೆ ತೆರಳಿ ವರಿಷ್ಠರಿಗೆ ತಿಳಿಸಿದ್ದೇನೆ. ಅವರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಆ ತೀರ್ಮಾನಕ್ಕೆ ತಲೆಬಾಗುವೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.

ಶಾಲೆಗಾಗಿ ನಾವು- ನೀವು ಕಾರ್ಯಕ್ರಮ ಉದ್ಘಾಟಿಸಲು ಗುರುವಾರ ಜಿಲ್ಲೆಗೆ ಭೇಟಿ ನೀಡಿ ಸುದ್ದಿಗಾರರೊಡನೆ ಮಾತನಾಡಿ, ಫಲಿತಾಂಶ ಇನ್ನೂ ಬಂದಿಲ್ಲ. ಕಾಯುತ್ತಿದ್ದೇನೆ ಎಂದು ನುಡಿದರು.

ರಾಜಕಾರಣದಲ್ಲಿ ಸ್ಥಾನಮಾನ ಸಿಕ್ಕಿದರೆ ಒಳ್ಳೆಯದು. ಸಿಗದಿದ್ದರೆ ಸಿಗಬೇಕು ಎಂಬ ಭಾವನೆ ತೀವ್ರವಾಗುವುದು ಸಹಜ. ಮನೆಗಳಲ್ಲೂ ಅದು ಆಗುತ್ತದೆ. ರಾಜಕಾರಣ ಸಮುದ್ರವಿದ್ದಂತೆ. ತೆರೆಗಳು ಏಳುತ್ತಿರುತ್ತವೆ. ಕರಾವಳಿಯಲ್ಲಿ ಕಡಲ ಕೊರೆತವೂ ಹೆಚ್ಚಾಗಿದೆಯಲ್ಲ ಹಾಗೆ. ಆದರೆ ರಾಜಕಾರಣದಲ್ಲಿ ಯಾಕೆ ಹೀಗಾಯಿತು ಎಂಬ ಪ್ರಶ್ನೆಯೇ ಅಪ್ರಸ್ತುತ ಎಂದರು.

ಮುಖ್ಯಮಂತ್ರಿಯಾಗಿ 11 ತಿಂಗಳ ಆಡಳಿತ ತೃಪ್ತಿ ತಂದಿದೆ. ವ್ಯವಸ್ಥೆಯನ್ನೇ ಬದಲಿಸುವ ಪ್ರಯತ್ನ ಮಾಡಿದ್ದೇನೆ. ಸಕಾಲ ಯೋಜನೆ ಅಂಥ ಪ್ರಯತ್ನಗಳಲ್ಲಿ ವಿಶೇಷವಾದದ್ದು. ವಿಧಾನಮಂಡಲದ 3 ಅಧಿವೇಶನ ಯಶಸ್ವಿಯಾಗಿ ನಡೆದಿದೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಐದು ಸ್ಥಾನ ಬಿಜೆಪಿಗೆ ದಕ್ಕಿದೆ. ಇವೆಲ್ಲ  ಸಾಧನೆಗಳೇ ಎಂದು ತಿಳಿಸಿದರು.

ಅಭಿವೃದ್ಧಿ ಬಗ್ಗೆ ಹೊರಗಿನ ಪ್ರಮಾಣಪತ್ರಗಳಿಗಿಂತಲೂ ಅಂತಃಕರಣದ ಪ್ರಮಾಣಪತ್ರ ಮುಖ್ಯ. ಅದನ್ನು ಎಲ್ಲರೂ ಅರಿಯಬೇಕು. ಪಕ್ಷ ಸಂಘಟನೆ ಅಥವಾ ಅಧಿಕಾರದಲ್ಲಿ ಯಾವುದಕ್ಕೆ ಆದ್ಯತೆ ಎಂಬ ಪ್ರಶ್ನೆಗೆ ಉತ್ತರಿಸಲಾಗುವುದಿಲ್ಲ.

ಏಕೆಂದರೆ ಅಂಥ ಆಯ್ಕೆ ಯಾರಿಗೂ ಇಲ್ಲ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿದ್ದಾಗ ರಾಜ್ಯದೆಲ್ಲೆಡೆ ಪ್ರವಾಸ ಮಾಡಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಸಾಕಷ್ಟು ಶ್ರಮಿಸಿದ್ದೆ. ನಾನು ಸಾಮಾನ್ಯ ಹಳ್ಳಿಯಿಂದ ಬಂದವ. ಅಂಥವನಿಗೆ ಪಕ್ಷ ಎಲ್ಲ ಸ್ಥಾನವನ್ನೂ ಕೊಟ್ಟಿದೆ. ಅತ್ಯಂತ ತೃಪ್ತ ರಾಜಕಾರಣಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.