ADVERTISEMENT

ಫ್ರಾನ್ಸ್‌ ಕಾನ್ಸಲ್‌ ಕಚೇರಿಗೆ ಬೆದರಿಕೆ ಪತ್ರ

ಅಲ್‌ ಕೈದಾ ಹೆಸರಿನಲ್ಲಿ ಪತ್ರ * ಪುಂಡರ ಕೃತ್ಯ: ಪೊಲೀಸರು

​ಪ್ರಜಾವಾಣಿ ವಾರ್ತೆ
Published 21 ಜನವರಿ 2016, 19:38 IST
Last Updated 21 ಜನವರಿ 2016, 19:38 IST
ಫ್ರಾನ್ಸ್‌ ಕಾನ್ಸಲ್‌ ಕಚೇರಿಗೆ ಬೆದರಿಕೆ ಪತ್ರ
ಫ್ರಾನ್ಸ್‌ ಕಾನ್ಸಲ್‌ ಕಚೇರಿಗೆ ಬೆದರಿಕೆ ಪತ್ರ   

ಬೆಂಗಳೂರು: ಗಣರಾಜ್ಯೋತ್ಸವ ಸಮಾರಂಭಕ್ಕೆ (ಜ.26) ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್‌ ಅವರು ಭೇಟಿ ನೀಡುತ್ತಿರುವ ಸಂದರ್ಭದಲ್ಲಿ, ‘ಅಲ್‌ ಕೈದಾ’ ಭಯೋತ್ಪಾದನಾ ಸಂಘಟನೆ ಹೆಸರಿನಲ್ಲಿ ವಸಂತನಗರದ ಫ್ರಾನ್ಸ್‌ ಕಾನ್ಸಲ್ ಕಚೇರಿಗೆ ಬೆದರಿಕೆ ಪತ್ರ ಬಂದಿದೆ.

‘ಆ ಪತ್ರವನ್ನು ಜ.9ರಂದು ಚೆನ್ನೈನಿಂದ ಪೋಸ್ಟ್ ಮಾಡಲಾಗಿದೆ.  ಜ.14ರಂದುಕಾನ್ಸಲ್ ಕಚೇರಿಗೆ ತಲುಪಿದೆ. ಈ ಬಗ್ಗೆ ದೂರು ಬಂದ ಕೂಡಲೇ ಎಸ್‌ಐ ನೇತೃತ್ವದ ತಂಡವನ್ನು ಚೆನ್ನೈಗೆ ಕಳುಹಿಸಿ, ಆ ವಿಳಾಸವನ್ನು ಪರಿಶೀಲಿಸಲಾಗಿದೆ. ಆದರೆ,  ಅದು ನಕಲಿ ವಿಳಾಸ ಎಂಬುದು ಖಚಿತವಾಗಿದೆ. ಯಾರೋ ಕಿಡಿಗೇಡಿಗಳು ದುರುದ್ದೇಶದಿಂದ ಈ ಪತ್ರ ಕಳುಹಿಸಿದ್ದಾರೆ ಎಂಬುದು ದೃಢಪಟ್ಟಿದೆ’ ಎಂದು ಕಾನೂನು ಸುವ್ಯವಸ್ಥೆ ವಿಭಾಗದ (ಪಶ್ಚಿಮ) ಹೆಚ್ಚುವರಿ ಪೊಲೀಸ್ ಕಮಿಷನರ್ ಚರಣ್ ರೆಡ್ಡಿ ತಿಳಿಸಿದರು.

ಪತ್ರದಲ್ಲೇನಿದೆ:  ‘ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಫ್ರಾನ್ಸ್ ಅಧ್ಯಕ್ಷರು ಪಾಲ್ಗೊಳ್ಳುವ ಮಾಹಿತಿ ಇದೆ. ಅವರು ನಗರಕ್ಕೆ ಬರಬಾರದು. ಈ ಆಜ್ಞೆ ಉಲ್ಲಂಘಿಸಿ ಬಂದರೆ ಸುಮ್ಮನಿರುವುದಿಲ್ಲ. ದೇಶದ ಬೇರೆಬೇರೆ ಕಡೆಗಳಲ್ಲಿ ನಾವು ನೆತ್ತರು ಹರಿಸಿರುವುದನ್ನು ಕಣ್ಣಾರೆ ಕಂಡಿದ್ದೀರಿ. ಇಲ್ಲೂ ಅದೇ ಗತಿಯಾಗುತ್ತದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

‘ಪತ್ರದ ಮೇಲೆ ಭಾರತದ ಭೂಪಟವಿದೆ. ಅಲ್ಲದೆ, ಉಗ್ರನೊಬ್ಬ ಬಂದೂಕು ಹಿಡಿದು ನಿಂತಿರುವಫೋಟೊ ಇದೆ. ಫ್ರಾನ್ಸ್‌ ಅಧ್ಯಕ್ಷರು ನಗರಕ್ಕೆ ಬರಬಾರದೆಂದು ಇಂಗ್ಲಿಷ್‌ ಭಾಷೆಯಲ್ಲಿ 4 ಸಾಲುಗಳನ್ನು ಬರೆದಿದ್ದಾರೆ. ಈ ಸಂಬಂಧ ಕಾನ್ಸಲ್‌ ಕಚೇರಿಯ ಉಪ ಮುಖ್ಯಸ್ಥರು ದೂರು ಕೊಟ್ಟಿದ್ದರು’ ಎಂದು ಚರಣ್‌ರೆಡ್ಡಿ ಮಾಹಿತಿ ನೀಡಿದರು.

‘ಅಲ್‌ ಕೈದಾ ಉಗ್ರ ಸಂಘಟನೆ ಜತೆ ನಂಟು ಹೊಂದಿರುವ ಆರೋಪದ ಮೇಲೆ ದೆಹಲಿ ಪೊಲೀಸರು ಇತ್ತೀಚೆಗೆ ಮೌಲಾನಾ ಸೈಯದ್ ಅನ್ಸರ್ ಶಾ ಖಾಸ್ಮಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು. ಅದರ ಬೆನ್ನಲ್ಲೇ ಇಂಥ ಪತ್ರ ಬಂದದ್ದು ಆತಂಕಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.