ADVERTISEMENT

ಬಂಟ್ವಾಳ ತಲುಪಿದ ಶರತ್‌ ಶವಯಾತ್ರೆ; ಬಿ.ಸಿ.ರೋಡ್‌ನಲ್ಲಿ ಮೆರವಣಿಗೆಗೆ ಕಲ್ಲೆಸೆತ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 7:28 IST
Last Updated 8 ಜುಲೈ 2017, 7:28 IST
ಬಂಟ್ವಾಳ ತಲುಪಿದ ಶರತ್‌ ಶವಯಾತ್ರೆ; ಬಿ.ಸಿ.ರೋಡ್‌ನಲ್ಲಿ ಮೆರವಣಿಗೆಗೆ ಕಲ್ಲೆಸೆತ
ಬಂಟ್ವಾಳ ತಲುಪಿದ ಶರತ್‌ ಶವಯಾತ್ರೆ; ಬಿ.ಸಿ.ರೋಡ್‌ನಲ್ಲಿ ಮೆರವಣಿಗೆಗೆ ಕಲ್ಲೆಸೆತ   

ಮಂಗಳೂರು: ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಅವರ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ಸಾಗುತ್ತಿದ್ದವರ ಮೇಲೆ ಬಿ.ಸಿ.ರೋಡ್‌ ಸಮೀಪದ ಕೈಕಂಬದಲ್ಲಿ ದುಷ್ಕರ್ಮಿಗಳು ಕಲ್ಲೆಸೆದಿದ್ದು, ಇನ್ನೋಳಿ ನಿವಾಸಿ ಲೋಹಿತ್‌ ಎಂಬುವವರು ಗಾಯಗೊಂಡಿದ್ದಾರೆ.

ಬೆಳಿಗ್ಗೆ 10.30ರ ಸುಮಾರಿಗೆ ಮಂಗಳೂರಿನ ಎ.ಜೆ.ಆಸ್ಪತ್ರೆಯಿಂದ ಶರತ್‌ ಮೃತದೇಹವನ್ನು ಬಿಗಿ ಪೊಲೀಸ್‌ ಭದ್ರತೆಯಲ್ಲಿ ಬಂಟ್ವಾಳ ತಾಲ್ಲೂಕಿನ ಸಜಿಪದತ್ತ ಕೊಂಡೊಯ್ಯಲಾಯಿತು. ಸಂಘ ಪರಿವಾರದ ಸಾವಿರಾರು ಕಾರ್ಯಕರ್ತರು ಶವಯಾತ್ರೆಯನ್ನು ಹಿಂಬಾಲಿಸಿ ಮೆರವಣಿಗೆಯಲ್ಲಿ ತೆರಳುತ್ತಿದ್ದಾರೆ. ಶವವನ್ನು ಹೊತ್ತ ವಾಹನದ ಹಿಂದಕ್ಕೆ ಒಂದು ಕಿಲೋಮೀಟರ್‌ಗೂ ಹೆಚ್ಚು ದೂರದವರೆಗೂ ಮೆರವಣಿಗೆ ಇದೆ.

ಬಿ.ಸಿ.ರೋಡ್‌ನಲ್ಲಿ ಶರತ್‌ ಅವರ ಲಾಂಡ್ರಿ ಎದುರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್‌, ಹೂವಿನ ಹಾರ ಹಾಕಿ ಗೌರವ ಸಲ್ಲಿಸಿದರು. ನಂತರ ಬಂಟ್ವಾಳದತ್ತ ಮೆರವಣಿಗೆ ಸಾಗಿತು. ಹಿಂದಕ್ಕೆ ಮೆರವಣಿಗೆಯಲ್ಲಿದ್ದವರ ಮೇಲೆ ದೂರದಿಂದ ಕಲ್ಲೊಂದು ಬಿದ್ದಿದೆ. ಎಸೆದವರು ಯಾರು ಎಂಬುದು ಗೊತ್ತಾಗಿಲ್ಲ. ಇದರಿಂದ ಸಿಟ್ಟಿಗೆದ್ದ ಸಂಘ ಪರಿವಾರದ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಕೆಲವು ಮನೆಗಳು, ಅಂಗಡಿ ಮುಂಗಟ್ಟುಗಳು, ವಾಹನಗಳಿಗೆ ಕಲ್ಲು ತೂರಾಟದಿಂದ ಹಾನಿಯಾಗಿದೆ.

ADVERTISEMENT

ಕಲ್ಲು ತೂರಾಟದಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸ್ಥಳದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರದ ಮೂಲಕ ಸಂಘ ಪರಿವಾರದ ಕಾರ್ಯಕರ್ತರನ್ನು ನಿಯಂತ್ರಿಸಿದ್ದಾರೆ. ತುಂಬೆ, ಫರಂಗಿಪೇಟೆ, ಬಿ.ಸಿ.ರೋಡ್‌, ಬಂಟ್ವಾಳ ಸೇರಿದಂತೆ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಸಾವಿರಾರು ಸಂಖ್ಯೆಯ ಪೊಲೀಸರನ್ನು ಈ ಮಾರ್ಗದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.