ADVERTISEMENT

ಬಂಟ್ವಾಳ: ಸಿಡಿಲಿಗೆ ತಾಯಿ,ಮಗಳು ಬಲಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2011, 19:30 IST
Last Updated 16 ಏಪ್ರಿಲ್ 2011, 19:30 IST
ಬಂಟ್ವಾಳ: ಸಿಡಿಲಿಗೆ ತಾಯಿ,ಮಗಳು ಬಲಿ
ಬಂಟ್ವಾಳ: ಸಿಡಿಲಿಗೆ ತಾಯಿ,ಮಗಳು ಬಲಿ   

ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಗ್ರಾಮದ ಕಲ್ಲಗುಡ್ಡೆ ದರ್ಖಾಸು ಎಂಬಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಸಿಡಿಲಿನ ಅಬ್ಬರಕ್ಕೆ ತಾಯಿ ಮತ್ತು ಪುತ್ರಿ ಮನೆಯೊಳಗೇ ಅಸುನೀಗಿದ್ದಾರೆ. ಪುತ್ರ ಗಾಯಗೊಂಡಿದ್ದಾನೆ. ತಾಲ್ಲೂಕಿನಾದ್ಯಂತ 20.8ಮಿ.ಮೀ. ಮಳೆಯಾಗಿದ್ದು, ಹಲವೆಡೆ ಅಡಿಕೆ, ಬಾಳೆಗಿಡಗಳು ನೆಲಕಚ್ಚಿವೆ. ಕಲ್ಲಗುಡ್ಡೆ ದಿ. ಮೋನಪ್ಪ ಪೂಜಾರಿ ಎಂಬವರ ಪತ್ನಿ ಸೀತಾ (42) ಮತ್ತು ಪುತ್ರಿ ಗಾಯತ್ರಿ(18) ಮೃತರು. ಪುತ್ರ ಗಣೇಶ ಅಲಿಯಾಸ್ ಚಿರಂಜೀವಿ(16)ಯನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಡರಾತ್ರಿ 11.55ರ ವೇಳೆಗೆ ಭಾರೀ ಮಳೆ-ಗಾಳಿ ಜತೆಗೇ ಸಿಡಿಲು ಅಪ್ಪಳಿಸಿದ್ದು, ಅಕ್ಕಪಕ್ಕದಲ್ಲಿಯೇ ಮಲಗಿದ್ದ ಅಮ್ಮ-ಮಗಳನ್ನು ಬಲಿತೆಗೆದುಕೊಂಡಿದೆ. ಸ್ವಲ್ಪ ದೂರದಲ್ಲಿ ಮಲಗಿದ್ದ ಗಣೇಶ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗಾಳಿ-ಸಿಡಿಲಿನ ಮಳೆ ವೇಳೆ ವಿದ್ಯುತ್ ಸಹ ಕೈಕೊಟ್ಟಿದೆ. ಪಕ್ಕದ ಮನೆಯವರು ಹೊರಬಂದು ನೋಡಿದಾಗ ಸೀತಾ ಅವರ ಮನೆಯಲ್ಲಿ ಗಣೇಶನ ನರಳಾಟ ಕೇಳಿಸಿದೆ. ಕೂಡಲೇ ಸಂಬಂಧಿ ರಾಜೇಶ ಪೂಜಾರಿ ಮತ್ತಿತರರು ಸೇರಿ ಬಾಗಿಲು ಮುರಿದು ಒಳಪ್ರವೇಶಿಸಿ ಗಣೇಶನನ್ನು ಆಸ್ಪತ್ರೆಗೆ ಕರದೊಯ್ದಿದ್ದಾರೆ.

ಸಮೀಪದ ಈಚಲು ಮರಕ್ಕೆ ಬಡಿದ ಸಿಡಿಲು ಬಳಿಕ ಸೀತಾ ಅವರ ಮನೆಯ ವಿದ್ಯುತ್ ಮೀಟರ್ ಅಪ್ಪಳಿಸಿದ್ದು, ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಸಿಡಿಲಿನ ಆಘಾತದ ತೀವ್ರತೆಗೆ ಮನೆಯಲ್ಲಿ ಚಿಕ್ಕ ಗುಂಡಿಯೇ ನಿರ್ಮಾಣವಾಗಿದ್ದು, ಅದರಿಂದ ಸಿಡಿದ ಮಣ್ಣು ಮೃತದೇಹಗಳ ಮೇಲೆಯೂ ಹರಡಿತ್ತು. ಗೋಡೆ ಗಡಿಯಾರ ಸಿಡಿಲಿನ ಹೊಡೆತಕ್ಕೆ ರಾತ್ರಿ 11.55ಕ್ಕೆ ಸ್ಥಗಿತವಾಗಿದೆ. ಗಡಿಯಾರದ ಗಾಜು ಚೂರಾಗಿ ಗಾಯತ್ರಿ ಕಣ್ಣಿಗೂ ಚುಚ್ಚಿಕೊಂಡಿದೆ. ಸಿಡಿಲಿನ ಅಬ್ಬರಕ್ಕೆ ಮನೆಯಲ್ಲಿದ್ದ ಪಾತ್ರೆ, ಬಟ್ಟೆಬರೆ ಚೆಲ್ಲಾಪಿಲ್ಲಿಯಾಗಿವೆ. ಒಟ್ಟು ರೂ. 1 ಲಕ್ಷದಷ್ಟು ಹಾನಿ ಅಂದಾಜು ಮಾಡಲಾಗಿದೆ.

ಅಂತ್ಯಕ್ರಿಯೆ: ಶನಿವಾರ ಮಧ್ಯಾಹ್ನ ಸೀತಾ ಮತ್ತು ಗಾಯತ್ರಿ ಅಂತ್ಯಕ್ರಿಯೆ ನೆರವೇರಿದೆ. ಗಣೇಶ ಇತ್ತೀಚೆಗಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ಫಲಿತಾಂಶ ನಿರೀಕ್ಷೆಯಲ್ಲಿದ್ದಾಗಲೇ ಅಮ್ಮ-ಅಕ್ಕನನ್ನು ಕಳೆದುಕೊಂಡು ಏಕಾಂಗಿಯಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.