ADVERTISEMENT

ಬಂಡಾಯ ಅಭ್ಯರ್ಥಿಯಾಗಲು ಶಶೀಲ ನಮೋಶಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ಗುಲ್ಬರ್ಗ: ಗುಲ್ಬರ್ಗ ದಕ್ಷಿಣ ಮತಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಅವಕಾಶ ಕೊಡದೇ ಇರುವುದು ನಿಚ್ಚಳವಾಗುತ್ತಿರುವಂತೆಯೇ, ಪಕ್ಷದ ಟಿಕೆಟ್ ಆಕಾಂಕ್ಷಿ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಗುಲ್ಬರ್ಗ ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದತ್ತಾತ್ರೇಯ ಪಾಟೀಲ ರೇವೂರ ಮಂಗಳವಾರ ಬೆಂಗಳೂರಿನಲ್ಲಿ ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಮಂಗಳವಾರ ಸಂಜೆ ಕಾರ್ಯಕರ್ತರ ಸಭೆ ನಡೆಸಿದ ಶಶೀಲ ನಮೋಶಿ, `ಹೇಗಾದರೂ ಸರಿ, ಚುನಾವಣೆ ಕಣಕ್ಕೆ ಇಳಿಯುವೆ' ಎಂದು ಘೋಷಿಸಿದರು.

`22 ವರ್ಷಗಳಿಂದಲೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಈವರೆಗೆ ಸುಮ್ಮನಿದ್ದ ಪಕ್ಷದ ಮುಖಂಡರು, ಕೊನೆಯ ಗಳಿಗೆಯಲ್ಲಿ ನನಗೆ ಅವಕಾಶ ಸಿಗದಂತೆ ಮಾಡುವ ಸೂಚನೆ ಸಿಕ್ಕಿದೆ. ಹೀಗಾಗಿ ಕಾರ್ಯಕರ್ತರು ಹಾಗೂ ಹಿತೈಶಿಗಳ ಸಲಹೆ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂದು ನಿರ್ಧರಿಸಿದ್ದೇನೆ.

ಬಿಜೆಪಿ ಬಂಡಾಯ ಅಭ್ಯರ್ಥಿ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವ ಬಗ್ಗೆ ಬುಧವಾರ ನಿರ್ಧರಿಸುವೆ` ಎಂದು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಇತರ ರಾಷ್ಟ್ರೀಯ ಪಕ್ಷಗಳ ಮುಖಂಡರು ತಮ್ಮನ್ನು ಸಂಪರ್ಕಿಸಿದ್ದು, ಈ ಕುರಿತು ಸಹ ಒಂದೆರಡು ದಿನದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

`ಶಾಸಕ ಚಂದ್ರಶೇಖರ ಪಾಟೀಲ ರೇವೂರ ನಿಧನದ ಹಿನ್ನೆಲೆಯಲ್ಲಿ ಎರಡೂವರೆ ವರ್ಷದ ಹಿಂದೆ ಉಪ ಚುನಾವಣೆ ನಡೆದಾಗ, ಅವರ ಪತ್ನಿಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ. ಆ ಸಂದರ್ಭದಲ್ಲಿ ಅವರ ಬೆಂಬಲಿಗರು ಪಕ್ಷದ ಧ್ವಜ ಹಾಗೂ ರಾಷ್ಟ್ರೀಯ ನಾಯಕರ ಭಾವಚಿತ್ರ ಸುಟ್ಟಿದ್ದರು. ಅಂಥವರನ್ನು ಕರೆದು ಟಿಕೆಟ್ ಕೊಡುವ ದುರ್ಗತಿ ಪಕ್ಷಕ್ಕೆ ಏಕೆ ಬಂತು?' ಎಂದು ನಮೋಶಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.